ADVERTISEMENT

ಉಕ್ಕು ಆಮದು ನಿರ್ಬಂಧಕ್ಕೆ ಟ್ರಂಪ್‌ ಕ್ರಮ

ಏಜೆನ್ಸೀಸ್
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಉಕ್ಕು ಮತ್ತು ಅಲ್ಯುಮಿನಿಯಂ ಆಮದು ನಿರ್ಬಂಧಿಸಲು ಗರಿಷ್ಠ ಪ್ರಮಾಣದಲ್ಲಿ ತೆರಿಗೆ ವಿಧಿಸುವ ನಿಲುವಿಗೆ ತಾವು ಬದ್ಧವಾಗಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ.

ವಿಶ್ವದಾದ್ಯಂತ ವ್ಯಕ್ತವಾಗುತ್ತಿರುವ ತೀಕ್ಷ್ಣ ಟೀಕೆಯ ಹೊರತಾಗಿಯೂ ದೇಶಿ ಉತ್ಪಾದಕರ ಹಿತರಕ್ಷಿಸಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಟ್ರಂಪ್‌ ಅವರ ಈ ಧೋರಣೆಗೆ ಉಕ್ಕು ಮತ್ತು ಅಲ್ಯುಮಿನಿಯಂ ತಯಾರಿಸುವ ಅಮೆರಿಕದ ಪ್ರಮುಖ ವಾಣಿಜ್ಯ ಪಾಲುದಾರ ದೇಶಗಳಿಂದ ವಿರೋಧ ವ್ಯಕ್ತವಾಗಿದೆ.

ಕೆನಡಾ, ಮೆಕ್ಸಿಕೊ, ಆಸ್ಟ್ರೇಲಿಯಾ, ಐರೋಪ್ಯ ಒಕ್ಕೂಟ ಮತ್ತು ಪ್ರತಿಸ್ಪರ್ಧಿ ದೇಶ ಚೀನಾ ಈ ನಿರ್ಧಾರವನ್ನು ಖಂಡಿಸಿವೆ. ಇದಕ್ಕೆ ಪ್ರತೀಕಾರದ ಕ್ರಮ ಕೈಗೊಳ್ಳಬೇಕಾದೀತು ಎಂದೂ ಎಚ್ಚರಿಸಿವೆ. ಇದು ವಿಶ್ವದಾದ್ಯಂತ ಷೇರುಪೇಟೆಗಳ ವಹಿವಾಟಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.

ADVERTISEMENT

ಅಮೆರಿಕದಲ್ಲಿ ಕಟ್ಟಡ ನಿರ್ಮಾಣ ಮತ್ತು ತಯಾರಿಕಾ ವಲಯದಲ್ಲಿ ಬಳಕೆಯಾಗುವ ಉಕ್ಕಿನ ಮೇಲೆ ಶೇ 25 ಮತ್ತು ಅಲ್ಯುಮಿನಿಯಂ ಮೇಲೆ ಶೇ 10ರಷ್ಟು ತೆರಿಗೆ ವಿಧಿಸಲು ಅಮೆರಿಕ ನಿರ್ಧರಿಸಿದೆ. ಮುಂದಿನ ವಾರ ಈ ಆದೇಶಕ್ಕೆ ಸಹಿ ಹಾಕುವುದಾಗಿ ಟ್ರಂಪ್‌  ಹೇಳಿದ್ದಾರೆ. ಅಧ್ಯಕ್ಷರ ನಿಲುವಿಗೆ ಆರ್ಥಿಕ ಸಲಹೆಗಾರ ಗ್ಯಾರಿ ಕೊಹ್ನ ಅವರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಈ ಕ್ರಮವು ಅಂತಿಮವಾಗಿ ಅಮೆರಿಕದ ಉದ್ದಿಮೆಗೆ ಗಂಡಾಂತರ ತಂದೊಡ್ಡಲಿದೆ’ ಎಂದೂ ಎಚ್ಚರಿಸಿದ್ದಾರೆ.

‘ನಮ್ಮ ಉದ್ದಿಮೆಗೆ ತೀವ್ರ ಹೊಡೆತ ನೀಡುವ ಮತ್ತು ಯುರೋಪ್‌ನಾದ್ಯಂತ ಸಾವಿರಾರು ಜನರ ಉದ್ಯೋಗ ಕಸಿಯುವ ಈ ನಿರ್ಧಾರದ ಬಗ್ಗೆ ನಾವು ಕೈಕಟ್ಟಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಿಲ್ಲ’ ಎಂದು ಐರೋಪ್ಯ ಒಕ್ಕೂಟದ ಮುಖ್ಯಸ್ಥ ಜೀನ್‌ ಕ್ಲೌಡ್‌ ಜಂಕರ್‌ ಪ್ರತಿಕ್ರಿಯಿಸಿದ್ದಾರೆ.

ಈ ತೆರಿಗೆ ಹೇರಿಕೆ ಸ್ವೀಕಾರಾರ್ಹವಲ್ಲ ಎಂದು ಕೆನಡಾ, ಜರ್ಮನಿ ತಿಳಿಸಿವೆ. ಈ ವಿಷಯದಲ್ಲಿ ಸಂಯಮ ತಾಳಲು ಮತ್ತು ಅಂತರರಾಷ್ಟ್ರೀಯ ವ್ಯಾಪಾರ ನಿಯಮ ಗೌರವಿಸಲು ಚೀನವು ಒತ್ತಾಯಿಸಿದೆ. ಅಮೆರಿಕದ ಧೋರಣೆಯನ್ನೇ ಇತರ ದೇಶಗಳೂ ಅನುಸರಿಸುವಂತಾದರೆ ಅಂತರ
ರಾಷ್ಟ್ರೀಯ ವ್ಯಾಪಾರ ವ್ಯವಸ್ಥೆ ಮೇಲೆ ಪರಿಣಾಮಗಳು ಉಂಟಾಗಲಿವೆ ಎಂದು ಚೀನಾದ ವಿದೇಶ ಸಚಿವಾಲಯ ವಕ್ತಾರರು ಆತಂಕ ವ್ಯಕ್ತಪ‍ಡಿಸಿದ್ದಾರೆ.

ತಕ್ಷಣದ ಪರಿಣಾಮ ಇಲ್ಲ: ಉಕ್ಕು ಆಮದು ನಿರ್ಬಂಧಿಸುವ ಟ್ರಂಪ್‌ ನಿಲುವು ಭಾರತದ ಉಕ್ಕು ರಫ್ತಿನ ಮೇಲೆ ತಕ್ಷಣಕ್ಕೆ ಪ್ರತಿಕೂಲ ಪರಿಣಾಮ ಬೀರಲಾರದು ಎಂದು ಭಾರತ ಪ್ರತಿಕ್ರಿಯಿಸಿದೆ.

‘ನಮ್ಮ ಉಕ್ಕು ರಫ್ತಿನಲ್ಲಿ ಅಮೆರಿಕದ ಪಾಲು ಕೇವಲ ಶೇ 2ರಷ್ಟಿದೆ. ಹೀಗಾಗಿ ಇದು ನಮ್ಮ ಮೇಲೆ ಹೆಚ್ಚಿನ ಪರಿಣಾಮವನ್ನೇನೂ ಬೀರಲಾರದು’ ಎಂದು ಉಕ್ಕು ಕಾರ್ಯದರ್ಶಿ ಅರುಣಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

*
ವಾಣಿಜ್ಯ ಸಮರಗಳು ಒಳ್ಳೆಯದು ಮತ್ತು ಅವುಗಳನ್ನು ಸುಲಭವಾಗಿ ಗೆಲ್ಲಬಹುದು.
-ಡೊನಾಲ್ಡ್ ಟ್ರಂಪ್‌, ಅಮೆರಿಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.