ADVERTISEMENT

ಉಣ್ಣೆ ಗಿರಣಿ ಸ್ಥಾಪನೆ ಸಚಿವ ಚಿಂಚನಸೂರು

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

ಬೆಂಗಳೂರು: ಯಾದಗಿರಿ ಅಥವಾ ಚಳ್ಳಕೆರೆಯಲ್ಲಿ ಉಣ್ಣೆ ಗಿರಣಿ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಜವಳಿ ಮತ್ತು ಬಂದರು ಸಚಿವ ಬಾಬುರಾವ್ ಚಿಂಚನಸೂರು ಶನಿವಾರ ಇಲ್ಲಿ ಹೇಳಿದರು.

ರಾಜ್ಯದಲ್ಲಿ ಒಂದು ಕೋಟಿ ಕುರಿಗಳಿವೆ. ಆದರೆ, ಎಲ್ಲಿಯೂ ಉಣ್ಣೆ ಗಿರಣಿ ಇಲ್ಲ. ಇದರಿಂದಾಗಿ ಕುರಿ ಉಣ್ಣೆ ಸರಿಯಾಗಿ ಬಳಕೆ ಆಗುತ್ತಿಲ್ಲ. ಇದನ್ನು ಮನಗಂಡು ಉಣ್ಣೆ ಗಿರಣಿ ಸ್ಥಾಪನೆ ಬಗ್ಗೆ ಚರ್ಚೆ ನಡೆದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

1,200 ಕೋಟಿ ವೆಚ್ಚದಲ್ಲಿ ಗಿರಣಿ ಸ್ಥಾಪನೆಗೆ 100 ಎಕರೆ ಭೂಮಿ ಬೇಕಾಗುತ್ತದೆ. ಕಂಬಳಿಗೆ ವಿದೇಶದಲ್ಲಿ ಬೇಡಿಕೆ ಇದೆ. ಹೀಗಾಗಿ ಗಿರಣಿ ಸ್ಥಾಪನೆಯಿಂದ ರಫ್ತಿಗೂ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಕಂಬಳಿ ಸೊಸೈಟಿಗಳು ಉಳಿಯಲಿವೆ. ಕುರಿ ಸಾಕುವ ರೈತರಿಗೂ ಅನುಕೂಲವಾಗಲಿದೆ ಎಂದರು.

ಜವಳಿ ಪಾರ್ಕ್: ಯಾದಗಿರಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ಸ್ಥಾಪನೆ ಸಂಬಂಧ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಯಾದಗಿರಿಯಲ್ಲಿ ಯಾವುದೇ ಕೈಗಾರಿಕೆ ಇಲ್ಲ. ಅಲ್ಲಿ ಪಾರ್ಕ್ ಸ್ಥಾಪಿಸುವುದರಿಂದ 5- 6 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಯಾದಗಿರಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ 3,300 ಎಕರೆ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅದರಲ್ಲಿ ಒಂದು ಸಾವಿರ ಎಕರೆ ಭೂಮಿಯನ್ನು ಜವಳಿ ಪಾರ್ಕ್ ಸ್ಥಾಪನೆಗೆ ಬಳಸಿಕೊಳ್ಳಬಹುದು. ಪಾರ್ಕ್ ಸ್ಥಾಪನೆಯಿಂದ ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ನೆರವಾಗಲಿದೆ ಎಂದರು.

ಬೇಲಿಕೇರಿ ಬಂದರಿಗೆ ವಾರದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಲ್ಲಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಸದ್ಯ ಆ ಬಂದರು ಸಿಬಿಐ ವಶದಲ್ಲಿದೆ. ಹೀಗಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ತನಿಖೆ ಪೂರ್ಣಗೊಂಡ ನಂತರ ಸಿಂಗಾಪುರ ಬಂದರಿನ ಮಾದರಿಯಲ್ಲಿ ಬೇಲಿಕೇರಿ ಬಂದರನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.