ADVERTISEMENT

ಉತ್ತಮ ಮುಂಗಾರು; ಆಹಾರ ಧಾನ್ಯ ದಾಖಲೆ ಇಳುವರಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST
ದೇಶದ ಹಲವೆಡೆ ಉತ್ತಮ ಮುಂಗಾರು ಮಳೆಯಾಗಿ ಅಣೆಕಟ್ಟೆ, ಕೆರೆಗಳು ಭರ್ತಿಯಾಗಿವೆ. ಅಗರ್ತಲಾ ಸಮೀಪದ ಮೋಹನಪುರ ಗ್ರಾಮದ ಗದ್ದೆಯೊಂದರಲ್ಲಿ ಭತ್ತದ ಪೈರುಗಳಿಗೆ ಕ್ರಿಮಿನಾಶಕ ಸಿಂಪಡಣೆ ನಡೆದಿದೆ	 -ರಾಯಿಟರ್ಸ್‌ ಚಿತ್ರ
ದೇಶದ ಹಲವೆಡೆ ಉತ್ತಮ ಮುಂಗಾರು ಮಳೆಯಾಗಿ ಅಣೆಕಟ್ಟೆ, ಕೆರೆಗಳು ಭರ್ತಿಯಾಗಿವೆ. ಅಗರ್ತಲಾ ಸಮೀಪದ ಮೋಹನಪುರ ಗ್ರಾಮದ ಗದ್ದೆಯೊಂದರಲ್ಲಿ ಭತ್ತದ ಪೈರುಗಳಿಗೆ ಕ್ರಿಮಿನಾಶಕ ಸಿಂಪಡಣೆ ನಡೆದಿದೆ -ರಾಯಿಟರ್ಸ್‌ ಚಿತ್ರ   

ನವದೆಹಲಿ (ಪಿಟಿಐ): ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಭತ್ತ ಸೇರಿದಂತೆ  ಪ್ರಮುಖ ಆಹಾರ ಧಾನ್ಯಗಳ ಇಳುವರಿ ದಾಖಲೆ ಮಟ್ಟ ತಲುಪಲಿದೆ ಎಂದು ಕೃಷಿ ಖಾತೆ ರಾಜ್ಯ ಸಚಿವ ತಾರಿಕ್ ಅನ್ವರ್ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

2011-12ನೇ ಸಾಲಿನ ಮುಂಗಾರಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟದ 1312.70 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯ ಉತ್ಪಾದನೆ ಆಗಿತ್ತು. ಆದರೆ, ಕಳೆದ ವರ್ಷ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ತಾನದಲ್ಲಿ ಬರಪರಿಸ್ಥಿತಿ ಇದ್ದುದರಿಂದ ಒಟ್ಟಾರೆ ಇಳುವರಿ ಯಲ್ಲಿ ಗಣನೀಯ ಕುಸಿತವಾಗಿತ್ತು.

ಭತ್ತವೂ 2011-12ರಲ್ಲಿ 927.80 ಲಕ್ಷ ಟನ್‌ಗಳಷ್ಟು ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಆಗಿತ್ತು. ಪ್ರಸಕ್ತ ಮುಂಗಾರಿನಲ್ಲಿ ಭತ್ತ ಬೆಳೆಯುವ ಪ್ರದೇಶ 747.78 ಲಕ್ಷ ಹೆಕ್ಟೇರ್‌ಗಳಿಗೆ(ಶೇ 17.70ರಷ್ಟು) ಹೆಚ್ಚಿದೆ. ದ್ವಿದಳ ಧಾನ್ಯ ಬೆಳೆಯುವ ಪ್ರದೇಶ ಶೇ 90ರಷ್ಟು ಹೆಚ್ಚಿದ್ದು, 73.62 ಲಕ್ಷ ಹೆಕ್ಟೇರ್‌ಗಳಿಗೆ ವಿಸ್ತರಿಸಿದೆ. 148.82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ ಬೆಳೆಯಲಾಗುತ್ತಿದೆ.

ಕಳೆದ ವಾರ ವಾಡಿಕೆಗಿಂತ ಶೇ 21ರಷ್ಟು ಹೆಚ್ಚು ಮಳೆಯಾಗಿದೆ. ಆಹಾರ ಧಾನ್ಯ ಇಳುವರಿ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯ ಇತ್ತೀಚೆಗೆ ಇಲ್ಲಿ ನಡೆದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಕೃಷಿ ಸಮ್ಮೇಳನದಲ್ಲಿ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.