ADVERTISEMENT

ಉದ್ದಿಮೆ ಸಂಸ್ಥೆಗಳ ಸ್ವಾಧೀನ ಸೆಬಿ ಹೊಸ ನಿಯಮ ಜಾರಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಉದ್ದಿಮೆ ಸಂಸ್ಥೆಗಳ ವಿಲೀನ ಮತ್ತು ಸ್ವಾಧೀನಕ್ಕೆ ಸಂಬಂಧಿಸಿದಂತೆ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಹೊಸ ನಿಯಮಗಳು ಜಾರಿಗೆ ಬಂದಿವೆ.

ಹೊಸ ನಿಯಮಗಳ ಅನ್ವಯ ಷೇರುಪೇಟೆಯಲ್ಲಿ ವಹಿವಾಟು ನಡೆಸುವ (ಪಟ್ಟಿಯಾಗಿರುವ) ಉದ್ದಿಮೆ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಇನ್ನು ಮುಂದೆ ಹೆಚ್ಚು ದುಬಾರಿಯಾಗಲಿದೆ. ಆದರೆ, ಸಾಮಾನ್ಯ ಷೇರುದಾರರಿಗೆ ಇದರಿಂದ ಹೆಚ್ಚು ಲಾಭವಾಗಲಿದೆ.

`ಸ್ವಾಧೀನ ನೀತಿ ಸಂಹಿತೆ~ ಎಂದೇ ಜನಪ್ರಿಯವಾಗಿರುವ ಈ ಹೊಸ ನಿಯಂತ್ರಣ ಕ್ರಮಗಳು ಈ ತಿಂಗಳ 22ರಿಂದ ಜಾರಿಗೆ ಬಂದಿವೆ. ಉದ್ದಿಮೆ ಸಂಸ್ಥೆಯೊಂದನ್ನು ಸ್ವಾಧೀನಪಡಿಸಿಕೊಂಡ ಸಂದರ್ಭದಲ್ಲಿ ಪ್ರವರ್ತಕರು ಮತ್ತು ಸಾಮಾನ್ಯ ಪಾಲುದಾರರ ಷೇರುಗಳಿಗೆ ಒಂದೇ ಬೆಲೆ ದೊರೆಯಲಿದೆ.

ಪ್ರವರ್ತಕರ ಪ್ರಭಾವಕ್ಕೆ ಅಡ್ಡಿ: ಸಂಸ್ಥೆಗಳ ಸ್ವಾಧೀನ ನೀತಿ ಸಂಹಿತೆಯಲ್ಲಿ `ಸೆಬಿ~ ಮಾಡಿರುವ ಬದಲಾವಣೆಗಳಿಂದಾಗಿ ಸಂಸ್ಥೆಯ ಮೇಲಿನ ಪ್ರವರ್ತಕರ ಹಿಡಿತವೂ ಸಡಿಲಗೊಳ್ಳಲಿದೆ.

ಇನ್ನೊಂದೆಡೆ ಪ್ರತಿಸ್ಪರ್ಧಿಗಳ ಸ್ವಾಧೀನ ಯತ್ನವು ಇನ್ನು ಮುಂದೆ ಸರಳಗೊಳ್ಳಲಿದೆ. ಶೇ 51ರಷ್ಟು ಪಾಲು ಬಂಡವಾಳದ ಬದಲಿಗೆ ಕೇವಲ ಶೇ 24.99ರಷ್ಟು  ಷೇರುಗಳನ್ನು ಹೊಂದಿದವರೂ ಈಗ ಸಂಸ್ಥೆಯ ಆಡಳಿತದಲ್ಲಿ ಅನೌಪಚಾರಿಕವಾಗಿ ಪ್ರಭಾವ ಬೀರಬಲ್ಲರು ಮತ್ತು ಸಂಸ್ಥೆಯ ಆಡಳಿತವನ್ನು ನಿಯಂತ್ರಿಸುವ ಅಧಿಕಾರವನ್ನೂ ಹೊಂದಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.