ADVERTISEMENT

ಉದ್ಯೋಗಿಗಳಿಂದ ಕಂಪೆನಿಗೆ ಲಾಭ: ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2011, 19:30 IST
Last Updated 24 ಏಪ್ರಿಲ್ 2011, 19:30 IST
ಉದ್ಯೋಗಿಗಳಿಂದ ಕಂಪೆನಿಗೆ ಲಾಭ: ಸಮೀಕ್ಷೆ
ಉದ್ಯೋಗಿಗಳಿಂದ ಕಂಪೆನಿಗೆ ಲಾಭ: ಸಮೀಕ್ಷೆ   

ನವದೆಹಲಿ (ಪಿಟಿಐ): ದೇಶಿ ಕಂಪೆನಿಗಳು ತಮ್ಮ ಪ್ರತಿ ಉದ್ಯೋಗಿಗಳಿಗೆ ವಾರ್ಷಿಕ ಸರಾಸರಿ `4.8 ಲಕ್ಷದವರೆಗೆ ವೇತನ ನೀಡುತ್ತವೆ. ಆದರೆ, ಪ್ರತಿ ಉದ್ಯೋಗಿಗಳಿಂದ ಇದೇ ಕಂಪೆನಿಗಳು    ` 6 ಲಕ್ಷದವರೆಗೆ ಲಾಭ ಮಾಡಿಕೊಳ್ಳುತ್ತವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಪ್ರೈಸ್‌ವಾಟರ್‌ಹೌಸ್ ಕೂಪರ್ಸ್‌  (ಪಿಡ್ಲ್ಯುಸಿ) ಎನ್ನುವ ಮಾನವ ಸಂಪನ್ಮೂಲ ಸಲಹಾ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ಭಾರತದ ಕಂಪೆನಿಗಳ ಮಾನವ ಬಂಡವಾಳ ಹೂಡಿಕೆಯ ಮೇಲಿನ ಪ್ರತಿಫಲ ಅನುಪಾತವು        ` 1.79 ಲಕ್ಷ ಇದೆ  ಎಂದು ಹೇಳಿದೆ.

ಇದರ ಜತೆಗೆ ಕಂಪೆನಿಗಳು ಪ್ರತಿ ಉದ್ಯೋಗಿಗಳ ಮೇಲೆ ಕಲಿಕೆ ಮತ್ತು ಅಭಿವೃದ್ಧಿಗಾಗಿ (ಎಲ್‌ಆಂಡ್‌ಡಿ) ತಲಾ `  7 ಸಾವಿರಗಳಷ್ಟು ಬಂಡವಾಳ ಹೂಡುತ್ತವೆ. ಇದೇ ಪ್ರವೃತ್ತಿ ಮುಂದುವರೆದರೆ ಭವಿಷ್ಯದಲ್ಲಿ ಭಾರತೀಯ ಕಂಪೆನಿಗಳು ತಮ್ಮ ಪ್ರತಿ ಉದ್ಯೋಗಿಗಳ ಮೂಲಕ ಸೃಷ್ಟಿಯಾಗುವ ` 100 ವರಮಾನಕ್ಕೆ `  15ರಷ್ಟು ನಿವ್ವಳ ಲಾಭ ಪಡೆಯುತ್ತವೆ ಎಂದಿದೆ.

ಭಾರತದ ಆರ್ಥಿಕತೆ ತ್ವರಿತವಾಗಿ ಬೆಳೆಯುತ್ತಿದ್ದು, ಕಂಪೆನಿಗಳು ತಮ್ಮ ಉದ್ಯಮದ ಗರಿಷ್ಠ ಪ್ರಗತಿಗಾಗಿ ಮಾನವ ಬಂಡವಾಳ ಹೂಡಿಕೆ ಹೆಚ್ಚಿಸಿವೆ. ಇದು ಒಟ್ಟಾರೆ ವೃದ್ಧಿ ದರದ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಪ್ರೈಸ್‌ವಾಟರ್‌ಹೌಸ್‌ನ ಭಾರತೀಯ ಮುಖ್ಯಸ್ಥ ಶಂಕರ್ ರಾಮಮೂರ್ತಿ ತಿಳಿಸಿದ್ದಾರೆ. 

ತಯಾರಿಕೆ ಮತ್ತು ಎಂಜಿನಿಯರಿಂಗ್ ಕ್ಷೇತ್ರದ ಕಂಪೆನಿಗಳಲ್ಲಿ ಪ್ರತಿ ಉದ್ಯೋಗಿಗಳ ಮೇಲಿನ ವರಮಾನವು ಗರಿಷ್ಠ ಪ್ರಮಾಣದಲ್ಲಿದೆ. ಶೀಘ್ರ ವಿಲೇವಾರಿ ಯಾಗುವ ಗ್ರಾಹಕ ಸರಕುಗಳು (ಎಫ್‌ಎಂಸಿಜಿ) ಮತ್ತು ಔಷಧ ತಯಾರಿಕೆ ಕಂಪೆನಿಗಳೂ ಹೂಡಿಕೆಗೆ ಹೋಲಿಸಿದರೆ ಉದ್ಯೋಗಿಗಳಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಿವೆ.

ಗರಿಷ್ಠ ವರಮಾನದ ಕಂಪೆನಿಗಳು ಕನಿಷ್ಠ ವರಮಾನದ ಕಂಪೆನಿಗಳಿಗೆ ಹೋಲಿಸಿದರೆ 1.4 ಪಟ್ಟು ಹೆಚ್ಚಿನ ಲಾಭವನ್ನು ಕೊಳ್ಳೆ ಹೊಡೆಯುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಂಸ್ಥೆಯು ದೇಶದಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ  37 ಕಂಪೆನಿಗಳನ್ನು ಸಂದರ್ಶಿಸಿದೆ. ಗರಿಷ್ಠ ವರಮಾನದ ಕಂಪೆನಿಗಳಿಗೆ ಹೋಲಿಸಿದರೆ, ಕೆಲ ಸಂಸ್ಥೆಗಳು ತಮ್ಮ ಉದ್ಯೋಗಿಗಳ ನೇಮಕಾತಿಗಾಗಿ ಹೆಚ್ಚಿನ ವೆಚ್ಚ ಭರಿಸುತ್ತವೆ. ‘ಐ.ಟಿ’ ಮತ್ತು  ಐ.ಟಿ. ಆಧಾರಿತ  ಕ್ಷೇತ್ರಗಳು ಗರಿಷ್ಠ ಸಂಖ್ಯೆಯ ಪದವೀಧರರನ್ನು ಉದ್ಯೋಗಕ್ಕಾಗಿ ನೇಮಿಸಿಕೊಳ್ಳುತ್ತವೆ. ಆದರೆ, ಹೊಸದಾಗಿ ಸೇರುವ ಪ್ರತಿಭೆಗಳನ್ನು ಉಳಿಸಿಕೊಳ್ಳುವಲ್ಲಿ ತಯಾರಿಕೆ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳು ಮುಂಚೂಣಿಯಲ್ಲಿವೆ ಎಂದೂ ಸಮೀಕ್ಷೆ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.