ADVERTISEMENT

ಉದ್ಯೋಗ ಭದ್ರತೆ ಭೀತಿ: ಸರ್ಕಾರಿ ಕೆಲಸಕ್ಕೆ ಆದ್ಯತೆ ಫ್ಲಿಕ್‌ಜಾಬ್ಸ್ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ನವದೆಹಲಿ (ಐಎಎನ್‌ಎಸ್): `ಉದ್ಯೋಗ ಭದ್ರತೆ~ ಭೀತಿ ಈಗ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳನ್ನೂ ಕಾಡುತ್ತಿದೆ. ಕಾರ್ಪೊರೇಟ್ ಕಂಪೆನಿಗಳಲ್ಲಿ ಕೈತುಂಬ ವೇತನ ಸಿಗುವ ಉದ್ಯೋಗ ಕೈಬೀಸಿ ಕರೆಯುತ್ತಿದ್ದರೂ ಈ ವಿದ್ಯಾರ್ಥಿಗಳು ಸರ್ಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಕೆಲಸ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಆನ್‌ಲೈನ್ ಉದ್ಯೋಗ ಮಾಹಿತಿ ತಾಣ `ಫ್ಲಿಕ್‌ಜಾಬ್ಸ್ ಡಾಟ್ ಕಾಂ~ ಈ ಸಮೀಕ್ಷೆ ನಡೆಸಿದೆ. ಸಂಸ್ಥೆ ಬಿಡುಗಡೆ ಮಾಡಿರುವ `ಉದ್ಯೋಗ ಭದ್ರತೆ ಮತ್ತು ಆದ್ಯತೆ - 2012~ ವರದಿಯಲ್ಲಿ ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಅದರಲ್ಲೂ ಹೊಸದಾಗಿ ವೃತ್ತಿ ಜೀವನ ಪ್ರಾರಂಭಿಸಲು ಇಷ್ಟಪಡುವ ಯುವ ಸಮೂಹ ಸರ್ಕಾರಿ ಸ್ವಾಮ್ಯದ ಕಂಪೆನಿಗಳಿಗೇ ತಮ್ಮ ಮೊದಲ ಆದ್ಯತೆ ಎನ್ನುತ್ತಿದ್ದಾರೆ. ಕಾರಣ ಉದ್ಯೋಗ ಭದ್ರತೆ ಭೀತಿ.

ಆಡಳಿತ ನಿರ್ವಹಣೆ ವಿಷಯದಲ್ಲಿ ಪದವಿ ಪಡೆದ ವನಿತೆಯರು ಮಾತ್ರ ಐ.ಟಿ ಕಂಪೆನಿಗಳಿಗಿಂತಳೂ ಬ್ಯಾಂಕುಗಳೇ ವಾಸಿ ಎನ್ನುತ್ತಿದ್ದಾರೆ. `ಬಿಸಿಎ ಮತ್ತು ಎಂಸಿಎ ಪದವೀಧರರಿಗೆ ಕೆಲಸಕ್ಕೆ `ಗೂಗಲ್~  ಮೊದಲ ಆಯ್ಕೆಯಾದರೆ, ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಅದರಲ್ಲೂ ಯುವಕರಿಗೆ ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ (ಎಸ್‌ಎಐಎಲ್) ಕೆಲಸಕ್ಕೆ ಸೇರಬೇಕೆನ್ನುವುದು ಹೆಗ್ಗುರಿ.

ADVERTISEMENT

ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಷೇರು ಮಾರುಕಟ್ಟೆಗಳಲ್ಲಿನ ಏರಿಳಿತಗಳಿಂದ ಮತ್ತೆ `ಸರ್ಕಾರಿ ಕೆಲಸ~ಕ್ಕೆ ಬೇಡಿಕೆ ಹೆಚ್ಚಿದೆ. ಕಾರ್ಪೊರೇಟ್ ಕಂಪೆನಿಗಳಿಗಿಂತ ಸರ್ಕಾರಿ ಸ್ವಾಮ್ಯದ (ಪಿಎಸ್‌ಯು) ಕಂಪೆನಿಗಳಲ್ಲಿ ವೇತನ ಕಡಿಮೆ ಇದ್ದರೂ `ಉದ್ಯೋಗ ಭದ್ರತೆ ಇದೆ~ ಎನ್ನುವುದು ಈ ವಿದ್ಯಾರ್ಥಿಗಳ ವಿಶ್ವಾಸ~ ಎನ್ನುತ್ತಾರೆ `ಫ್ಲಿಕ್‌ಜಾಬ್ಸ್‌ನ `ಸಿಇಒ~ ರಾಜೇಶ್ ಕುಮಾರ್.

`ಒಮ್ಮೆ ಕೆಲಸಕ್ಕೆ ಸೇರಿದರೆ ನಿವೃತ್ತಿಯಾಗುವವರೆಗೂ ಉದ್ಯೋಗ ಭದ್ರತೆ ಇರುತ್ತದೆ ಎನ್ನುವುದು ಸರ್ಕಾರಿ ಕೆಲಸದ ಬೇಡಿಕೆ ಹೆಚ್ಚಲು ಕಾರಣ. ಭ್ರಷ್ಟಾಚಾರ, ಕಳ್ಳತನ ಮತ್ತು ಕೆಲಸಕ್ಕೆ ಸಂಬಂಧಿಸಿದ ಇತರೆ ಅಕ್ರಮಗಳು ಪತ್ತೆಯಾದರೂ, ಅಮಾನತು, ವರ್ಗಾವಣೆಯಂತ ಸಾಮಾನ್ಯ ಶಿಕ್ಷೆ ಮಾತ್ರ ಇರುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿ ಸಹ ಕಾರ್ಪೊರೇಟ್ ಕಂಪೆನಿಗಳಷ್ಟೇ ಉತ್ತಮ ವೇತನ ಇದೆ ಎನ್ನುತ್ತಾರೆ ರಾಜೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.