ADVERTISEMENT

ಎಟಿಎಂ: ಗುರಿಗಿಂತ ಹಿಂದೆ

ಗುರಿ 34,668;ಸಾಧ್ಯವಾಗಿದ್ದು 14,855 ಘಟಕ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST
ಎಟಿಎಂ: ಗುರಿಗಿಂತ ಹಿಂದೆ
ಎಟಿಎಂ: ಗುರಿಗಿಂತ ಹಿಂದೆ   

ನವದೆಹಲಿ(ಪಿಟಿಐ): ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಡಿಸೆಂಬರ್‌ ವೇಳೆಗೆ ಕೇವಲ 14,855 ‘ಎಟಿಎಂ’ಗಳನ್ನು ಆರಂಭಿಸಿ ನಿಗದಿತ ಗುರಿಗಿಂತ ಬಹಳ ಹಿಂದೆ ಉಳಿದಿವೆ. ಪ್ರಸಕ್ತ ಹಣಕಾಸು ವರ್ಷ ಕೊನೆಗೊಳ್ಳುವುದರೊಳಗೆ, ಅಂದರೆ ಮಾ. 31ಕ್ಕೂ ಮುನ್ನ ಇನ್ನೂ 19,813 ಎಟಿಎಂಗಳನ್ನು ಆರಂಭಿಸಬೇಕಿದೆ.

‘ಪ್ರತಿ ಬ್ಯಾಂಕ್‌ ಶಾಖೆಗೂ ತಾಗಿಕೊಂಡಂ­ತೆಯೇ ಒಂದು ಎಟಿಎಂ ಘಟಕ ಇರುವಂತೆ ನೋಡಿಕೊಳ್ಳಬೇಕಿದೆ’ ಎಂದು 2013; 14ನೇ ಹಣಕಾಸು ವರ್ಷದ ಮುಂಗಡಪತ್ರದಲ್ಲಿ ಗುರಿ ನಿಗದಿಪಡಿಸಲಾಗಿದೆ. ಅದರಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ದೇಶದಾದ್ಯಂತ ಹೊಂದಿರುವ 72,340 ಶಾಖೆಗಳಲ್ಲಿಯೂ ಎಟಿಎಂ ಘಟಕ ಅಳವಡಿಸಿಕೊಳ್ಳಬೇಕಿದೆ. 2013ರ ಮಾರ್ಚ್‌ನಲ್ಲಿ ಒಟ್ಟು 37,672 ಶಾಖೆಗಳು ಮಾತ್ರವೇ ಎಟಿಎಂ ಘಟಕಗಳನ್ನು ಜತೆಗಿಟ್ಟುಕೊಂಡಿವೆ. ಹಾಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸದಾಗಿ 34,668 ಎಟಿಎಂ ಕೇಂದ್ರಗಳನ್ನು ಆರಂಭಿಸಬೇಕಾಗಿತ್ತು.

ಡಿ. 31ರ ವೇಳೆಗೆ ನಿಗದಿತ ‘ಎಟಿಎಂ’ ಸ್ಥಾಪನೆ ಗುರಿಯಲ್ಲಿ ಶೇ 75ರಷ್ಟು (25,950 ಎಟಿಎಂ ಆರಂಭ) ಸಾಧನೆ ಆಗಬೇಕಿತ್ತು. ಆದರೆ, ಸಾಧ್ಯವಾಗಿದ್ದು ಮಾತ್ರ ಕೇವಲ 14,855! ಡಿಸೆಂಬರ್‌ವರೆಗೆ, ಭಾರತೀಯ ಸ್ಟೇಟ್‌ ಬ್ಯಾಂಕ್‌ ಹೊಸದಾಗಿ 2,266 ಎಟಿಎಂ ಆರಂಭಿಸಿದ್ದರೆ, ಸಿಂಡಿಕೇಟ್‌ ಬ್ಯಾಂಕ್‌ 1,560, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ 1,408, ಬ್ಯಾಂಕ್‌ ಆಫ್‌ ಇಂಡಿಯಾ 1,319, ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ 1,044, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ 1,004, ಅಲಹಾಬಾದ್‌ ಬ್ಯಾಂಕ್‌ 385 ಎಟಿಎಂಗಳನ್ನು ನೆಲೆಗೊಳಿಸಿವೆ.

ಇದ್ದುದರಲ್ಲಿಯೇ ಬ್ಯಾಂಕ್‌ ಆಫ್‌ ಬರೋಡ, ಐಡಿಬಿಐ ಬ್ಯಾಂಕ್‌ ಮತ್ತು ವಿಜಯಾ ಬ್ಯಾಂಕ್‌ ಅದಾಗಲೇ ವರ್ಷದ ನಿಗದಿತ ಗುರಿಗೆ ಹತ್ತಿರದಲ್ಲಿವೆ. ಇವು ಕ್ರಮವಾಗಿ 2 ಮತ್ತು 32 ಹಾಗೂ 39 ಶಾಖೆಗಳನ್ನಷ್ಟೇ ಬಾಕಿ ಉಳಿಸಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.