ADVERTISEMENT

ಎನ್‌ಎಂಡಿಸಿ:ಕಾಮಗಾರಿ ಶೀಘ್ರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 16:50 IST
Last Updated 25 ಫೆಬ್ರುವರಿ 2011, 16:50 IST

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಗಣಿಗಾರಿಕೆ ಅಭಿವೃದ್ಧಿ ನಿಗಮವು  (ಎನ್‌ಎಂಡಿಸಿ) ರಷ್ಯಾದ ಸೆವೆರಸ್ಟಲ್ ಸಂಸ್ಥೆಯ ಜತೆಗಿನ ಸಹಭಾಗಿತ್ವದಲ್ಲಿ ಕರ್ನಾಟಕದಲ್ಲಿ ಸ್ಥಾಪಿಸಲಿರುವ 20 ಲಕ್ಷ ಟನ್ ಸಾಮರ್ಥ್ಯದ  ಉಕ್ಕು ಸ್ಥಾವರದ ನಿರ್ಮಾಣ ಕಾಮಗಾರಿಯನ್ನು 2012ರಲ್ಲಿ ಕೈಗೆತ್ತಿಕೊಳ್ಳಲಿದೆ.

ಈ ಯೋಜನೆಗಾಗಿ 2,500 ಎಕರೆಗಳಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಉದ್ದೇಶಕ್ಕೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ್ಙ 55 ಕೋಟಿಗಳಷ್ಟು ಆರಂಭಿಕ ಠೇವಣಿ ಇರಿಸಲಾಗಿದೆ. 2012ರಲ್ಲಿ ಸ್ಥಾವರದ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ನಿಗಮದ ಅಧ್ಯಕ್ಷ ರಾಣಾ ಸೋಮ್ ಹೇಳಿದ್ದಾರೆ.

ಅಂದಾಜು ್ಙ 25 ಸಾವಿರ ಕೋಟಿ ವೆಚ್ಚದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಉಕ್ಕು ಸ್ಥಾವರದ ಉತ್ಪಾದನೆಯು 2016ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಆರಂಭಿಕ 2 ದಶಲಕ್ಷ ಟನ್ ಸಾಮರ್ಥ್ಯದ ಉಕ್ಕು ಸ್ಥಾವರ ಸ್ಥಾಪಿಸಲು ರಷ್ಯಾದ ಪ್ರಮುಖ ಉಕ್ಕು ತಯಾರಿಕಾ ಸಂಸ್ಥೆ  ಒಜೆಎಸ್‌ಸಿ ಸೆವೆರಸ್ಟಲ್ ಜತೆ ಕಳೆದ ಡಿಸೆಂಬರ್‌ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಸ್ಥಾವರದ ಸಾಮರ್ಥ್ಯವನ್ನು 5 ದಶಲಕ್ಷ ಟನ್‌ಗಳಿಗೆ (ಎಂಟಿ) ಹೆಚ್ಚಿಸಲೂ ಅವಕಾಶ ಇದೆ.

50:50 ರಷ್ಟು ಪಾಲುದಾರಿಕೆಯ ಈ ಜಂಟಿ ಯೋಜನೆಗೆ ರಷ್ಯಾದಲ್ಲಿನ ಕಲ್ಲಿದ್ದಲು ಗಣಿ ಘಟಕ ಮತ್ತು ಭಾರತದಲ್ಲಿನ ಕಬ್ಬಿಣ ಅದಿರು ಗಣಿಗಾರಿಕೆ ಘಟಕಗಳು ಕಚ್ಚಾ ಸಾಮಗ್ರಿಯನ್ನು ನಿಯಮಿತವಾಗಿ ಪೂರೈಸಲು ನೆರವಾಗಲಿವೆ. ಕರ್ನಾಟಕದಲ್ಲಿನ ಈ ಉಕ್ಕು ಸ್ಥಾವರವು, ದೇಶದಲ್ಲಿನ ‘ಎನ್‌ಎಂಡಿಸಿ’ಯ ಎರಡನೆ ಘಟಕವಾಗಿರಲಿದೆ. ಛತ್ತೀಸಗಡದಲ್ಲಿ ್ಙ 15 ಸಾವಿರ ಕೋಟಿ ವೆಚ್ಚದಲ್ಲಿನ ಸ್ಥಾವರದ ನಿರ್ಮಾಣ ಕಾರ್ಯವು 2014ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕೇಂದ್ರೋದ್ಯಮಗಳ ‘ನವರತ್ನ’ಗಳಲ್ಲಿ  ಒಂದಾಗಿರುವ ‘ಎನ್‌ಎಂಡಿಸಿ’, ವಾರ್ಷಿಕ 30  ದಶಲಕ್ಷ ಟನ್‌ಗಳಷ್ಟು ಕಬ್ಬಿಣ ಅದಿರು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕರ್ನಾಟಕ ಮತ್ತು ಛತ್ತೀಸಗಡಗಳಲ್ಲಿ ಮೂರು  ಸಂಪೂರ್ಣ ಯಾಂತ್ರೀಕೃತ ಗಣಿಗಳು ಕಾರ್ಯನಿರ್ವಹಿಸುತ್ತಿವೆ.ಸದ್ಯಕ್ಕೆ ಕಬ್ಬಿಣ ಅದಿರಿನ ಉಂಡೆಯ ದರವು ಪ್ರತಿ ಟನ್‌ಗೆ 150 ಡಾಲರ್‌ಗಳಷ್ಟಿದ್ದರೆ, (್ಙ 6900) ನುಣುಪಾದ ಪುಡಿಯು ಪ್ರತಿ ಟನ್‌ಗೆ 140 ಡಾಲರ್‌ಗಳಷ್ಟಿದೆ.

ದೋಣಿಮಲೈಯಲ್ಲಿ ತಯಾರಿಕಾ ಘಟಕ
ಹೈದರಾಬಾದ್ (ಪಿಟಿಐ): ದೇಶದ ಅತಿದೊಡ್ಡ ಕಬ್ಬಿಣ ಅದಿರು ತಯಾರಿಕಾ ಸಂಸ್ಥೆಯಾಗಿರುವ ರಾಷ್ಟ್ರೀಯ ಗಣಿ ಅಭಿವೃದ್ಧಿ ನಿಗಮವು (ಎನ್‌ಎಂಡಿಸಿ) ಕರ್ನಾಟಕದಲ್ಲಿ ಹೊಸ ಕಬ್ಬಿಣದ ಅದಿರು ತಯಾರಿಕಾ ಘಟಕ ಪ್ರಾರಂಭಿಸಲು ್ಙ150 ಕೋಟಿ ಹೂಡಿಕೆ ಮಾಡಲಿದೆ.

‘ಈ ಉದ್ದೇಶಿತ ಘಟಕವು 3 ಲಕ್ಷ ಟನ್ ಅದಿರು ತಯಾರಿಕೆ ಸಾಮರ್ಥ್ಯ ಹೊಂದಿದೆ. ಮುಖ್ಯವಾಗಿ ದೇಶದ ವಿವಿಧ ಭಾಗಗಳಲ್ಲಿ ಗಣಿಗಾರಿಕೆಯಿಂದ ಲಭ್ಯವಾಗುವ ಅದಿರು ತ್ಯಾಜ್ಯವನ್ನು ಬಳಸಿಕೊಂಡು ಇದು ಕಾರ್ಯನಿರ್ವಹಿಸಲಿದೆ’ ಎಂದು ಹಿರಿಯ ಕೇಂದ್ರೋದ್ಯಮ  ಅಧಿಕಾರಿಯೊಬ್ಬರು ಇಲ್ಲಿ ತಿಳಿಸಿದ್ದಾರೆ.

‘ದೇಶದ ವಿವಿಧ ಭಾಗಗಳಲ್ಲಿರುವ  ಗಣಿಗಾರಿಕೆ ಘಟಕಗಳ ಮೂಲಕ ‘ಎನ್‌ಎಂಡಿಸಿ’ ಬಳಿ ಈಗಾಗಲೇ ಸುಮಾರು 12 ದಶಲಕ್ಷ ಟನ್ ಕಬ್ಬಿಣದ ಅದಿರು ತ್ಯಾಜ್ಯ ಸಂಗ್ರಹವಿದೆ. ಅಲ್ಲದೆ, ಕರ್ನಾಟಕದ ದೋಣಿಮಲೈಯಲ್ಲಿ  ಕಬ್ಬಿಣದ ಅದಿರು  ತ್ಯಾಜ್ಯದ ಲಭ್ಯತೆ ಸಾಕಷ್ಟು ಪ್ರಮಾಣದಲ್ಲಿದ್ದು, ಇಲ್ಲಿಯೇ ತಯಾರಿಕಾ ಘಟಕ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಅಭಿವೃದ್ಧಿ ಮತ್ತು ಸಂಶೋಧನೆ ತಂಡ ವಿಶೇಷ ಅದಿರು ಸಂಸ್ಕರಣ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ‘ಎನ್‌ಎಂಡಿಸಿ’ ಅಧ್ಯಕ್ಷ ರಾಣಾ ಸೋಮ್ ತಿಳಿಸಿದ್ದಾರೆ.

‘ಹೊಸ ತಂತ್ರಜ್ಞಾನದಲ್ಲಿ ಉತ್ಕೃಷ್ಟ ದರ್ಜೆಯ ಕಬ್ಬಿಣದ ಅದಿರನ್ನು ತಯಾರಿಸಲಾಗುವುದು. 24 ರಿಂದ 30 ತಿಂಗಳ ಒಳಗೆ ಇದು ಅಸ್ತಿತ್ವಕ್ಕೆ ಬರಲಿದೆ’  ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.