ADVERTISEMENT

ಎಫ್‌ಡಿಐನಿಂದ ರೈತರಿಗೆ ಲಾಭ: ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಲೂಧಿಯಾನ (ಪಿಟಿಐ): `ಬಹುಬ್ರಾಂಡ್ ಚಿಲ್ಲರೆ ವಲಯದಲ್ಲಿ ಶೇ 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡುವ ಸರ್ಕಾರದ ನಿರ್ಧಾರದಿಂದ ರೈತರಿಗೆ ಹಾಗೂ ಗ್ರಾಹಕರಿಗೆ ಪ್ರಯೋಜನವಾಗಲಿದೆ' ಎಂದು ಪ್ರಧಾನಿ ಮನಮೋಹನ್ ಸಿಂಗ್ ಶನಿವಾರ ಇಲ್ಲಿ ಹೇಳಿದರು.

ಎಫ್‌ಡಿಐ ನಿರ್ಧಾರಕ್ಕೆ ಪಂಜಾಬ್ ರೈತ ಸಂಘಟನೆಗಳು ಬೆಂಬಲ ನೀಡಿವೆ ಎಂದೂ ಅವರು ತಿಳಿಸಿದರು.
ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಅವರು, `ಎಫ್‌ಡಿಐನಿಂದ ಕೃಷಿ ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಬಹುದು' ಎಂದರು.

`ಪಂಜಾಬ್‌ನಂಥ ರಾಜ್ಯಗಳು ಹಣ್ಣು ಹಾಗೂ ತರಕಾರಿ ಜತೆಗೆ ಪರ್ಯಾಯ ಬೆಳೆಗಳಾದ ಹತ್ತಿ, ಕಬ್ಬು, ಎಣ್ಣೆಬೀಜ ಹಾಗೂ ಮೆಕ್ಕೆಜೋಳ ಬೆಳೆಯಬಹುದು' ಎಂದೂ ಸಲಹೆ ನೀಡಿದರು.

`ಹವಾಮಾನ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಕೃಷಿ ವಿವಿಗಳು ಸನ್ನದ್ಧವಾಗಬೇಕು. ತಾಪಮಾನ ಏರಿಕೆಯಿಂದ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ' ಎಂದು ಸಿಂಗ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.