ADVERTISEMENT

ಎಲ್ಲ ಗ್ರಾಮಗಳಿಗೆ ಬ್ಯಾಂಕಿಂಗ್ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST

ಬೆಂಗಳೂರು: ‘ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ರಾಜ್ಯದ ಇನ್ನೂ ಸುಮಾರು 3,395 ಗ್ರಾಮಗಳಲ್ಲಿ ಬ್ಯಾಂಕಿಂಗ್ ಸೌಲಭ್ಯ ಇಲ್ಲ. ಹೀಗಾಗಿ 2012ರ ಮಾರ್ಚ್ ವೇಳೆಗೆ ಈ ಎಲ್ಲ ಗ್ರಾಮಗಳಲ್ಲಿ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಸಿಂಡಿಕೇಟ್ ಬ್ಯಾಂಕಿನ  ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ ಅಧ್ಯಕ್ಷ ಬಸಂತ್ ಸೇಠ್ ಸೋಮವಾರ ಇಲ್ಲಿ ತಿಳಿಸಿದರು.

ರಾಜ್ಯ ಮಟ್ಟದ ಬ್ಯಾಂಕ್ ಮುಖ್ಯಸ್ಥರ ಸಮಿತಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ತನ್ನ 115ನೇ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ‘ಬ್ಯಾಂಕಿಂಗ್ ಸೌಲಭ್ಯ ಇಲ್ಲದ ಗ್ರಾಮಗಳಲ್ಲಿ ಹೊಸದಾಗಿ ಬ್ಯಾಂಕ್ ಶಾಖೆಗಳನ್ನು ತೆರೆಯುವುದು ಅಥವಾ ಇತರ ವಾಣಿಜ್ಯ ವ್ಯಕ್ತಿಗಳ ಮೂಲಕ ಬ್ಯಾಂಕಿಂಗ್ ಸೇವೆ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು. ‘2010ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಆದ್ಯತಾ ವಲಯಕ್ಕೆ ಒಟ್ಟು ` 19,008 ಕೋಟಿ   ಸಾಲ ನೀಡಲಾಗಿದೆ. ವಾರ್ಷಿಕ ಗುರಿಯಾದ ` 38,952 ಕೋಟಿಗಳಿಗೆ ಹೋಲಿಸಿದರೆ ಶೇ 48.80ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ವಿವರಿಸಿದರು. ‘ಕೃಷಿ ಕ್ಷೇತ್ರಕ್ಕೆ ಒಟ್ಟು ` 12,874 ಕೋಟಿ ಸಾಲ ನೀಡಲಾಗಿದೆ. ಕೈಗಾರಿಕಾ ಕ್ಷೇತ್ರಕ್ಕೆ ` 3,512 ಕೋಟಿ  ಸಾಲ ಮಂಜೂರು ಮಾಡಿದ್ದು, ನಿರೀಕ್ಷೆ ಪ್ರಕಾರವೇ ಯೋಜನೆಗಳ ಅನುಷ್ಠಾನ ಆಗುತ್ತಿದೆ’ ಎಂದು ಅವರು ಹೇಳಿದರು.

ಅಧಿಕಾರಿಗಳಿಗೆ ತಾಕೀತು: ಸಭೆಯಲ್ಲಿ ಹಾಜರಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮಾತನಾಡಿ, ಕಿರು ಹಣಕಾಸು ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಎಚ್ಚರವಹಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ADVERTISEMENT

‘ಈ ಯೋಜನೆಯಿಂದಾಗಿ ಆಂಧ್ರಪ್ರದೇಶದಲ್ಲಿ ಬಡ್ಡಿ ಪ್ರಮಾಣ ಹೆಚ್ಚಾಗಿ ಅನೇಕ ಅನಾಹುತಗಳು ಸಂಭವಿಸಿತು.  ಆ ರೀತಿ ರಾಜ್ಯದಲ್ಲಿ ಆಗದಂತೆ ಎಚ್ಚರಿಕೆವಹಿಸಬೇಕು. ಕಿರು ಹಣಕಾಸು ಯೋಜನೆಗಳಡಿ ವಿಪರೀತ ಬಡ್ಡಿ ವಿಧಿಸುವುದರ ಮೇಲೆ ನಿಯಂತ್ರಣ ಹೇರಬೇಕು ಎಂದರು. ಪ್ರತಿ ಬ್ಯಾಂಕರುಗಳ ಸಭೆಯಲ್ಲೂ ಸಾಲ ಕೊಟ್ಟಿದ್ದನ್ನೇ ದೊಡ್ಡ ಪ್ರಗತಿ ಎನ್ನುವ ಹಾಗೆ ತೋರಿಸಲಾಗುತ್ತದೆ. ಆದರೆ, ನಿಜಕ್ಕೂ ಇನ್ನೂ ಏನೇನು ಆಗಬೇಕು ಎನ್ನುವುದರ ಬಗ್ಗೆಯೂ ಚರ್ಚೆ ಆಗಬೇಕು. ಸರ್ಕಾರದ ಕಡೆಯಿಂದ ಲೋಪಗಳಿದ್ದರೆ ಅದನ್ನು ತಿಳಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ. ಅಧಿಕಾರಿಗಳ ಅಸಹಕಾರ ಇದ್ದರೆ ಕ್ರಮ ತೆಗೆದುಕೊಳ್ಳಲು ಅನುಕೂಲ ಆಗುತ್ತದೆ ಎಂದು ವಿವರಿಸಿದರು. ‘ಉತ್ತಮ ಸರ್ಕಾರೇತರ ಸಂಘ ಸಂಸ್ಥೆಗಳ ಸಹಾಯದ ವನ್ನು ಬ್ಯಾಂಕುಗಳು ಪಡೆಯಬೇಕು. ಆ ಮೂಲಕ ಯೋಜನೆಗಳ ಅನುಷ್ಠಾನವನ್ನು ನಿಗದಿತ ಅವಧಿಯೊಳಗೆ ಮಾಡಬೇಕು’ ಎಂದು ಹೇಳಿದರು. ಬ್ಯಾಂಕರುಗಳ ಸಮಿತಿಯ ಸಂಚಾಲಕ ಜಿ.ರಾಮನಾಥನ್, ಕಾರ್ಯನಿರ್ವಾಹಕ ನಿರ್ದೇಶಕ ರವಿ ಚಟರ್ಜಿ,  ನಬಾರ್ಡ್‌ನ ಪ್ರಧಾನ ವ್ಯವಸ್ಥಾಪಕ ಡಾ.ವೆಂಕಟೇಶ್ ತಗತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.