ADVERTISEMENT

ಎಸ್‌ಎಐಎಲ್ ಷೇರು ವಿಕ್ರಯಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST

 ನವದೆಹಲಿ (ಪಿಟಿಐ): `ಸ್ಟೀಲ್ ಅಥಾರಿಟಿ ಆಫ್ ಇಂಡಿಯ~(ಎಸ್‌ಎಐಎಲ್) ದಿಂದ ಹೂಡಿಕೆ ಹಿಂತೆಗೆತಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಆ ಮೂಲಕ ರೂ4 ಸಾವಿರ ಕೋಟಿ ಸಂಗ್ರಹ ನಿರೀಕ್ಷೆ ಇಟ್ಟುಕೊಂಡಿದೆ.

`ಸೇಲ್~ನಲ್ಲಿನ ಶೇ 10.82ರಷ್ಟು ಪಾಲನ್ನು ಷೇರು ವಿನಿಮಯ ಕೇಂದ್ರಗಳ ಮೂಲಕ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ.

ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಸದೀಯ ಸಮಿತಿ `ಎಸ್‌ಎಐಎಲ್~ ಷೇರು ವಿಕ್ರಯಕ್ಕೆ ಅನುಮೋದನೆ ನೀಡಿದೆ. ಸದ್ಯ ಸರ್ಕಾರ `ಎಸ್‌ಎಐಎಲ್~ನಲ್ಲಿ ಶೇ 85.82ರಷ್ಟು ಪಾಲು ಹೊಂದಿದ್ದು, ಷೇರು ವಿಕ್ರಯದ ನಂತರ ಇದು ಶೇ 75ಕ್ಕೆ ಇಳಿಕೆ ಕಾಣಲಿದೆ. ಪ್ರಸಕ್ತ ವರ್ಷದ ಅಂತ್ಯಕ್ಕೆ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯದ ಮೂಲಕ ಒಟ್ಟು ರೂ. 30 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.

  ಆದರೆ, ಜಾಗತಿಕ ಮಟ್ಟದಲ್ಲಿನ ಆರ್ಥಿಕ ಅಸ್ಥಿರತೆ ಮತ್ತು ಮಾರುಕಟ್ಟೆ ದಿಢೀರ್ ಏರಿಳಿತಗಳಿಂದ ಷೇರು ವಿಕ್ರಯ ಇನ್ನೂ ಪ್ರಾರಂಭಗೊಂಡಿಲ್ಲ.  ಹಾಗಾಗಿಯೇ `ರಾಷ್ಟ್ರೀಯ ಇಷ್ಪತ್ ನಿಗಮ್ ಲಿಮಿಟೆಡ್~(ಆರ್‌ಐಎನ್‌ಎಲ್)ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪ್ರಕ್ರಿಯೆಯನ್ನೂ ಮುಂದೂಡಲಾಗಿದೆ.

ಹಿಂದೂಸ್ತಾನ್ ಏರೊನಾಟಿಕ್ಸ್ ಲಿ.(ಎಚ್‌ಎಎಲ್), ಬಿಎಚ್‌ಇಎಲ್, ನ್ಯಾಷನಲ್ ಅಲ್ಯೂಮಿನಿಯಂ ಕಂಪೆನಿ, ಹಿಂದೂಸ್ತಾನ್ ಕಾಪರ್ ಲಿ., ಆಯಿಲ್ ಇಂಡಿಯ ಲಿ. ಕಂಪೆನಿಗಳು ಕೂಡ ಪ್ರಸಕ್ತ ವರ್ಷದ ಹೂಡಿಕೆ ಹಿಂತೆಗೆತ ಪ್ರಕ್ರಿಯೆ ಪಟ್ಟಿಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.