ADVERTISEMENT

ಎಸ್‌ಬಿಎಚ್ ಲಾಭ ಶೇ 11 ವೃದ್ಧಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 19:30 IST
Last Updated 27 ಏಪ್ರಿಲ್ 2012, 19:30 IST
ಎಸ್‌ಬಿಎಚ್ ಲಾಭ ಶೇ 11 ವೃದ್ಧಿ
ಎಸ್‌ಬಿಎಚ್ ಲಾಭ ಶೇ 11 ವೃದ್ಧಿ   

ಹೈದರಾಬಾದ್: ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್    (ಎಸ್‌ಬಿಎಚ್) ಮಾರ್ಚ್ 31ಕ್ಕೆ ಕೊನೆಗೊಂಡ 2011-   12ನೇ ಹಣಕಾಸು ವರ್ಷದಲ್ಲಿ ರೂ. 1298.27 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ. 11.32ರಷ್ಟು ವೃದ್ಧಿ ದಾಖಲಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಬ್ಯಾಂಕ್ ರೂ. 1166.24 ಕೋಟಿ ನಿವ್ವಳ ಲಾಭ ಗಳಿಸಿತ್ತು.

2010-11ರಲ್ಲಿ ರೂ. 2848.51 ನಿವ್ವಳ ಬಡ್ಡಿ ವರಮಾನ ಗಳಿಸಿದ್ದ ಬ್ಯಾಂಕ್, 2011-12ರಲ್ಲಿ 3364.49 ಕೋಟಿಗೆ ಹೆಚ್ಚಿಸಿಕೊಂಡಿದೆ. ಆ ಮೂಲಕ ಬ್ಯಾಂಕ್‌ನ ವಾರ್ಷಿಕ ಬಡ್ಡಿ ವರಮಾನ ಗಳಿಕೆಯಲ್ಲಿಯೂ ಶೇ. 18.11ರಷ್ಟು ಹೆಚ್ಚಳವಾಗಿದೆ.
 

ಎಂ.ಭಗವಂತ ರಾವ್
ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿ(ಎನ್‌ಪಿಎ)2012ರ ಮಾರ್ಚ್ ವೇಳೆಗೆ  ರೂ. 2007 ಕೋಟಿ (ಶೇ. 2.56)ಯಷ್ಟಿದ್ದರೆ, ನಿವ್ವಳ ಎನ್‌ಪಿಎ ಕೇವಲ ರೂ. 1002 (ಶೇ. 1.30)ರಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ 2007 ಕೋಟಿಯಷ್ಟಿರುವ ಒಟ್ಟಾರೆ ಎನ್‌ಪಿಎಯನ್ನು ಇನ್ನಷ್ಟು ಕಡಿಮೆ ಮಾಡಲಾಗುವುದು ಎಂದು ಎಂ.ಭಗವಂತ ರಾವ್ ವಿಶ್ವಾಸ ವ್ಯಕ್ತಪಡಿಸಿದರು.

2011-12ನೇ ಸಾಲಿನ 4ನೇ ತ್ರೈಮಾಸಿಕದಲ್ಲಿ ರೂ. 481.04 ಕೋಟಿ ನಿವ್ವಳ ಲಾಭವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿನ ರೂ. 450.35 ಕೋಟಿ  ನಿವ್ವಳ ಲಾಭಕ್ಕೆ ಹೋಲಿಸಿದಲ್ಲಿ ಶೇ. 6.81ರ ಪ್ರಗತಿ ದಾಖಲಾಗಿದೆ ಎಂದು ಎಸ್‌ಬಿಎಚ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಭಗವಂತ ರಾವ್ ಪ್ರಜಾವಾಣಿಗೆ ಶುಕ್ರವಾರ ತಿಳಿಸಿದರು.

ಬಡ್ಡಿ ವರಮಾನದಲ್ಲಿ ಹೆಚ್ಚಳವಾಗಿರುವುದೇ ನಿವ್ವಳ ಲಾಭ ಗಳಿಕೆಯಲ್ಲಿನ ಪ್ರಗತಿ ಕಾರಣವಾಗಿದೆ ಎಂದರು.
2011-12ರಲ್ಲಿ ಬ್ಯಾಂಕ್ ರೂ. 1,80,143 ಕೋಟಿ ವಹಿವಾಟು ನಡೆಸಿದೆ. 2012ರ ಸೆಪ್ಟೆಂಬರ್ ವೇಳೆಗೆ 2 ಲಕ್ಷ ಕೋಟಿ ವಹಿವಾಟು ನಡೆಸುವುದೇ ನಮ್ಮ ಸದ್ಯದ ಗುರಿಯಾಗಿದೆ ಎಂದರು.

2011-12ರಲ್ಲಿ ಠೇವಣಿ ಮೊತ್ತ ಲಕ್ಷ ಕೋಟಿಯ ಗಡಿ ದಾಟಿದ್ದು, 78,337 ಕೋಟಿ ಸಾಲ ವಿತರಿಸಲಾಗಿದೆ. ವಾರ್ಷಿಕ  ರೂ 23,146 ಕೋಟಿಯಷ್ಟು ಹೆಚ್ಚು ವಹಿವಾಟು ನಡೆಸುವ ಮೂಲಕ ಶೇ. 14.74ರ ಸಾಧನೆ ತೋರಲಾಗಿದೆ. ಅಲ್ಲದೆ, ಠೇವಣಿ ಸಂಗ್ರಹದಲ್ಲಿ ಶೇ. 11.19, ಸಾಲ ವಿತರಣೆಯಲ್ಲಿ ಶೇ. 19.71ರ ಹೆಚ್ಚಳವಾಗಿದೆ.

ಅದರಲ್ಲೂ ಮುಖ್ಯವಾಗಿ 12,909 ಕೋಟಿ ಕೃಷಿ ಸಾಲ ವಿತರಿಸಿದ್ದು, ಶೇ. 20.93ರಷ್ಟು ಉತ್ತಮ ಸಾಧನೆಯೂ ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿಯೂ ಠೇವಣಿ ಸಂಗ್ರಹದಲ್ಲಿ ಶೇ. 21 ಮತ್ತು ಸಾಲ ವಿತರಣೆಯಲ್ಲಿ ಶೇ. 18-20ರಷ್ಟು ಬೆಳವಣಿಗೆ ಕಾಣುವ ಗುರಿ ಹೊಂದಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT