ADVERTISEMENT

ಎಸ್‌ಬಿಐ ಹಣಕಾಸು ಸಾಮರ್ಥ್ಯ: ಸೂಚ್ಯಂಕ ಕುಸಿತ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 19:30 IST
Last Updated 4 ಅಕ್ಟೋಬರ್ 2011, 19:30 IST

ಮುಂಬೈ (ಪಿಟಿಐ): ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಹಣಕಾಸು ಸಾಮರ್ಥ್ಯವನ್ನು ಜಾಗತಿಕ ಮೌಲ್ಯಮಾಪನಾ ಸಂಸ್ಥೆ ಮೂಡಿಸ್ ಇನ್‌ವೆಸ್ಟರ್ಸ್ ಸರ್ವಿಸ್ ತಗ್ಗಿಸಿರುವುದು ಮಂಗಳವಾರ ಮುಂಬೈ ಷೇರುಪೇಟೆಯಲ್ಲಿ ಸೂಚ್ಯಂಕವು ಮತ್ತಷ್ಟು ಕುಸಿಯಲು ಕಾರಣವಾಯಿತು.

ಸಂವೇದಿ ಸೂಚ್ಯಂಕವು 287 ಅಂಶಗಳಷ್ಟು ಕುಸಿತ ದಾಖಲಿಸಿ, 15,864.86 ಅಂಶಗಳಿಗೆ ಇಳಿಯಿತು. ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟಿನ ಜತೆಗೆ, `ಎಸ್‌ಬಿಐ~ನ ಹಣಕಾಸು ಸಾಮರ್ಥ್ಯ ತಗ್ಗಿಸಿರುವ ವರದಿಗಳು ಹೂಡಿಕೆದಾರರಲ್ಲಿ ಇನ್ನಷ್ಟು ನಿರಾಶೆ ಮೂಡಿಸಿವೆ.

ಮೂಡಿಸ್ ಇನ್‌ವೆಸ್ಟರ್ಸ್ ಸರ್ವಿಸ್, `ಎಸ್‌ಬಿಐ~ನ ಹಣಕಾಸು ಸಾಮರ್ಥ್ಯವನ್ನು ಇ ನಿಂದ ಡಿ+ ಗೆ   ಇಳಿಸಿರುವುದರಿಂದ ಷೇರು ಬೆಲೆ 52 ವಾರಗಳ ಹಿಂದಿನ ಮಟ್ಟಕ್ಕೆ ಕುಸಿಯಿತು.

ಬ್ಯಾಂಕ್‌ಗಳ ಷೇರು ಬೆಲೆಗಳು ಈಗಾಗಲೇ ತೀವ್ರ ಒತ್ತಡ ಎದುರಿಸುತ್ತಿವೆ.  ಹೆಚ್ಚುತ್ತಿರುವ ಬಡ್ಡಿ ದರಗಳು ಸಾಲಗಾರರ ಸಾಲ ಮರು ಪಾವತಿ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಸುಸ್ತಿದಾರರ ಸಂಖ್ಯೆಯೂ ಹೆಚ್ಚಳಗೊಳ್ಳುತ್ತಿದೆ. ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಷೇರು ಬೆಲೆಗಳೂ ಈಗಾಗಲೇ 52 ವಾರಗಳ ಹಿಂದಿನ ಮಟ್ಟಕ್ಕೆ ಇಳಿದಿವೆ.

ವಾಹನ ತಯಾರಿಕಾ ಸಂಸ್ಥೆಗಳ ಷೇರು ಬೆಲೆಗಳು ಕೂಡ ಕುಸಿಯುತ್ತಿವೆ. ಬಡ್ಡಿ ದರ ಹೆಚ್ಚಳ ಮತ್ತು ಪೆಟ್ರೋಲ್ ಬೆಲೆ ಹೆಚ್ಚಳದಿಂದಾಗಿ ಹಬ್ಬದ ದಿನಗಳಲ್ಲಿ ವಾಹನಗಳ ಮಾರಾಟ ಕಡಿಮೆಯಾಗಲಿರುವ ಸಾಧ್ಯತೆಗಳೇ ಇದಕ್ಕೆ ಕಾರಣ.

ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಗ್ರೀಕ್ ಹೊಸ ಹಣಕಾಸು ನೆರವು ಪಡೆಯಲು ಹೆಣಗಾಡುತ್ತಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿಯೇ ಇದೆ. ಈ ವಿದ್ಯಮಾನಗಳು ಷೇರುಪೇಟೆಯಲ್ಲಿ ನಿರಂತರವಾಗಿ ಮಾರಾಟ ಒತ್ತಡ ಕಂಡು ಬರಲು ಕಾರಣವಾಗುತ್ತಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ತುರ್ತು ಬಂಡವಾಳದ ನೆರವು ?
ನವದೆಹಲಿ (ಪಿಟಿಐ):
ಮೌಲ್ಯಮಾಪನಾ ಸಂಸ್ಥೆ ಮೂಡಿಸ್, `ಎಸ್‌ಬಿಐ~ನ ಸಾಲದ ಸಾಮರ್ಥ್ಯ ತಗ್ಗಿಸಿರುವುದರಿಂದ ಷೇರು ಬೆಲೆ ಎರಡು ವರ್ಷಗಳ ಹಿಂದಿನ ಮಟ್ಟಕ್ಕೆ 1786.70ಕ್ಕೆ ಕುಸಿದಿದೆ.

ಬ್ಯಾಂಕ್‌ನ ಸ್ವತಂತ್ರ ಕಾರ್ಯನಿರ್ವಹಣೆಯ ಸಾಮರ್ಥ್ಯ ಕಡಿಮೆಯಾಗಿರುವುದಾಗಿ ಮೂಡಿಸ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಬ್ಯಾಂಕ್‌ನ ಅಧ್ಯಕ್ಷ ಪ್ರತೀಪ್ ಚೌಧುರಿ ಅವರು, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಕೂಡ `ಡಿ+~ಸ್ಥಾನಮಾನ ಹೊಂದಿವೆ. ಬ್ಯಾಂಕ್‌ಗೆ ತುರ್ತಾಗಿ  ಬಾಹ್ಯ ಹಣಕಾಸಿನ ಬೆಂಬಲ ಇರುವುದನ್ನು ಇದು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ದೇಶದ ಅತಿದೊಡ್ಡ ಬ್ಯಾಂಕ್‌ಗೆ ಸಾಧ್ಯವಾದಷ್ಟು ಬೇಗ ಬಂಡವಾಳದ ನೆರವು ನೀಡಲು ಈ ಬೆಳವಣಿಗೆ ಸರ್ಕಾರದ ಮೇಲೆ  ಒತ್ತಡ ಹೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.