ADVERTISEMENT

‘ಏರ್ ಇಂಡಿಯಾ: ಅಗ್ಗದ ದರಕ್ಕೆ ಖರೀದಿ ಹುನ್ನಾರ’

ಪಿಟಿಐ
Published 11 ಏಪ್ರಿಲ್ 2018, 19:40 IST
Last Updated 11 ಏಪ್ರಿಲ್ 2018, 19:40 IST
‘ಏರ್ ಇಂಡಿಯಾ: ಅಗ್ಗದ ದರಕ್ಕೆ ಖರೀದಿ ಹುನ್ನಾರ’
‘ಏರ್ ಇಂಡಿಯಾ: ಅಗ್ಗದ ದರಕ್ಕೆ ಖರೀದಿ ಹುನ್ನಾರ’   

ಮುಂಬೈ: ಸರ್ಕಾರಿ ಸ್ವಾಮ್ಯದ ನಷ್ಟಪೀಡಿತ ನಾಗರಿಕ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾದ ಸ್ವಾಧೀನ ಪ್ರಕ್ರಿಯೆಯಿಂದ ದೇಶಿ ವಿಮಾನಯಾನ ಸಂಸ್ಥೆಗಳು ಹಿಂದೆ ಸರಿಯುತ್ತಿರುವುದನ್ನು ಸಂಸ್ಥೆಯ 10 ಕಾರ್ಮಿಕ ಸಂಘಟನೆಗಳ ವೇದಿಕೆ ಟೀಕಿಸಿದೆ.

ಅಗ್ಗದ ದರಕ್ಕೆ ಮಾರಾಟ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರವಾಗಿ ಇಂಡಿಗೊ, ಜೆಟ್‌ವೇರ್‌ ಸಂಸ್ಥೆಗಳು ‘ಎ.ಐ’ ಖರೀದಿಸುವ ಪ್ರಕ್ರಿಯೆಯಿಂದ ಹಿಂದೆ ಸರಿದಿವೆ ಎಂದು ವೇದಿಕೆಯು ಆರೋಪಿಸಿದೆ.

‘ಎ.ಐ’ದ ಷೇರುವಿಕ್ರಯದ ಕುರಿತು ಸರ್ಕಾರ ನಿಯಮಗಳನ್ನು ಪ್ರಕಟಿಸಿದ ನಂತರ ದೇಶಿ ವಿಮಾನ ಯಾನ ಸಂಸ್ಥೆಗಳು ತಮ್ಮ ಈ ಮೊದಲಿನ ನಿಲುವಿನಿಂದ ದೂರ ಸರಿಯುತ್ತಿವೆ.

ADVERTISEMENT

ಈ ಸಂಸ್ಥೆಗಳು ಕೈ ತಿರುಚುವ ತಂತ್ರ ಬಳಸುತ್ತಿದ್ದು, ಸರ್ಕಾರವು ತನ್ನ ನಿಬಂಧನೆಗಳನ್ನು ಸಡಿಲಿಸಿ ತಮಗೆ ಅನುಕೂಲಕರವಾದ ನಿಯಮಗಳನ್ನು ರೂಪಿಸುವಂತೆ ಒತ್ತಡ ಹೇರಲು ಹೀಗೆ ಮಾಡುತ್ತಿವೆ. ಅಗ್ಗದ ದರದಲ್ಲಿ ಸ್ವಾಧೀನಪಡಿಸಿಕೊಳ್ಳುವುದು ಅವುಗಳ ಹುನ್ನಾರವಾಗಿದೆ ಎಂದು ವೇದಿಕೆಯು ಹೇಳಿಕೆಯಲ್ಲಿ ತಿಳಿಸಿದೆ.

ಟಾಟಾ ಸಮೂಹದ ನಿರಾಸಕ್ತಿ: ‘ಎ.ಐ’ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿದ ಸಂಸ್ಥೆಗಳ ಸಾಲಿಗೆ ಈಗ ಟಾಟಾ ಸಮೂಹವೂ ಸೇರ್ಪಡೆಯಾಗಿದೆ. ಟಾಟಾ ಸಮೂಹವು ಈಗಾಗಲೇ ಎರಡು ವಿಮಾನ ಯಾನ ಸಂಸ್ಥೆಗಳಲ್ಲಿ ಪಾಲುದಾರಿಕೆ ಹೊಂದಿದೆ.

ಖರೀದಿಗೆ ಮುಂದೆ ಬರುವ ಸಂಸ್ಥೆಯು ‘ಎ.ಐ’ ಅನ್ನು ಷೇರುಪೇಟೆ ವಹಿವಾಟಿನಲ್ಲಿ ಸೇರ್ಪಡೆ ಮಾಡಬೇಕು. ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಬಾರದು. ಖರೀದಿದಾರರು ತಮ್ಮ ಸದ್ಯದ ಉದ್ದಿಮೆಯಲ್ಲಿ ‘ಎ.ಐ’ ವಿಲೀನಗೊಳಿಸಬಾರದು ಎನ್ನುವ ನಿಬಂಧನೆಗಳು ಖರೀದಿ ಉತ್ಸಾಹಕ್ಕೆ ತಣ್ಣೀರೆರಚಿವೆ.

ಸರ್ಕಾರದ ಅನೇಕ ನಿಬಂಧನೆಗಳ ಕಾರಣಕ್ಕೆ ಈ ಸ್ವಾಧೀನ ಪ್ರಕ್ರಿಯೆ ಜಾರಿಗೊಳಿಸುವ ಬಗ್ಗೆ ಟಾಟಾ ಗ್ರೂಪ್‌ ಅನುಮಾನ ಹೊಂದಿದೆ. ಷೇರು ವಿಕ್ರಯದಲ್ಲಿ ಭಾರಿ ಮೊತ್ತ ತೊಡಗಿಸುವವರು, ಸಂಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಲು ಬಯಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.