ADVERTISEMENT

ಐಟಿ ಡಾಟ್ ಬಿಜ್ -2011ಕ್ಕೆ ಚಾಲನೆ ಅಭಿವೃದ್ಧಿ: ಕಲಾಂ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST
ಐಟಿ ಡಾಟ್ ಬಿಜ್ -2011ಕ್ಕೆ ಚಾಲನೆ ಅಭಿವೃದ್ಧಿ: ಕಲಾಂ ಸಲಹೆ
ಐಟಿ ಡಾಟ್ ಬಿಜ್ -2011ಕ್ಕೆ ಚಾಲನೆ ಅಭಿವೃದ್ಧಿ: ಕಲಾಂ ಸಲಹೆ   

ಬೆಂಗಳೂರು: ಮಾಹಿತಿ, ಜೈವಿಕ  ಮತ್ತು ನ್ಯಾನೊ ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯು ದೇಶದ ಭವಿಷ್ಯವನ್ನೇ ಬದಲಿಸಲಿದೆ ಎಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಇಲ್ಲಿ ಬೆಂಗಳೂರು ಐಟಿ ಡಾಟ್‌ಬಿಜ್ -2011ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,  ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯು ಶ್ರೀಸಾಮಾನ್ಯನ ಬದುಕನ್ನೂ ಉತ್ತಮ ಪಡಿಸಿಸುವಂತಿರಬೇಕು. ಈ ಹಿನ್ನೆಲೆಯಲ್ಲಿ ಸಾಮಾಜಿಕ, ಆರ್ಥಿಕ, ಮಾನವೀಯ ನೆಲೆಗಟ್ಟಿನಲ್ಲಿ ಅಭಿವೃದ್ಧಿಯ ಕುರಿತು ಉದ್ಯಮ ಸಂಸ್ಥೆಗಳು ಯೋಚಿಸಬೇಕು ಎಂದರು.

ಕಳೆದ ಒಂದು ದಶಕದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳಾಗಿವೆ. ಇದರಿಂದ ತಂತ್ರಜ್ಞಾನ ಜನಸಾಮಾನ್ಯರಿಗೂ ಕೈಗೆಟುಕುತ್ತಿದೆ. ಅಗ್ಗದ ಕಾರು, ಅಗ್ಗದ ಮೊಬೈಲ್, ಈಗ ವಿದ್ಯಾರ್ಥಿಗಳಿಗಾಗಿ ಅಗ್ಗದ ಟಚ್ ಪ್ಯಾಡ್ ಟ್ಯಾಬ್ಲೆಟ್‌ಗಳು ಮಾರುಕಟ್ಟೆಗೆ ಬರುತ್ತಿವೆ ಎಂದರು. 
 
ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನವನ್ನು ಕರ್ನಾಟಕ ಸರ್ಕಾರ ಒಂದೇ ಸೂರಿನಡಿ ತಂದಿದೆ. ಇದು ದೇಶದ ಆರ್ಥಿಕ ವೃದ್ಧಿಗೂ ಸಹಕಾರಿ. ಆದರೆ, ಇದರ ಜತೆಯಲ್ಲೇ, ಮೂಲಸೌಕರ್ಯ ವೃದ್ಧಿ ಮತ್ತು ಉತ್ತಮ ಶಿಕ್ಷಣದೆಡೆಗೂ ಗಮನ ಹರಿಸಬೇಕು ಎಂದರು. 

 ಐಟಿ ಬಿಜ್ ಮೇಳ  ಅಕ್ಟೋಬರ್ 18 ರಿಂದ 20ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು, ಹಲವಾರು ಐ.ಟಿ ಕಂಪೆನಿಗಳು  ಮೇಳದಲ್ಲಿ ಭಾಗವಹಿಸುತ್ತಿವೆ.

ಹೊಸಅನಿಮೇಷನ್ ನೀತಿ:  2009-10ನೇ ಸಾಲಿನಲ್ಲಿ ರಾಜ್ಯದ ಐಟಿ ವರಮಾನ ದಾಖಲೆ ಮಟ್ಟ ತಲುಪಿದೆ. ಸದ್ಯದಲ್ಲೇ ಅನಿಮೇಷನ್ ಮತ್ತು ಗೇಮಿಂಗ್‌ಗೆ ಸಂಬಂಧಿಸಿದ ಹೊಸ ನೀತಿಯನ್ನು  ಪ್ರಕಟಿಸಲಿದ್ದೇವೆ ಎಂದು ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಹೇಳಿದರು.

ಕೈಗಾರಿಕಾ ಸಚಿವ ಮುರುಗೇಶ ಆರ್ ನಿರಾಣಿ, ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್ ವಿದ್ಯಾಶಂಕರ್,  ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾದ ನಿರ್ದೇಶಕ ಜೆ. ಪಾರ್ಥಸಾರಥಿ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸಂಶೋಧನೆ ಘಟಕ
ದೇಶದಲ್ಲಿ ಮಾಹಿತಿ ತಂತ್ರಜ್ಞಾನ ತ್ವರಿತವಾಗಿ ಬೆಳೆಯುತ್ತಿದ್ದು, ಕಳೆದ 2 ವರ್ಷಗಳಲ್ಲಿ ದೇಶದ ಐ.ಟಿ ಕ್ಷೇತ್ರದಲ್ಲಿ 5 ಲಕ್ಷ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಮೊಬೈಲ್ ಫೋನ್ ಆಧಾರಿತ ಸಂವಹನ ಕ್ರಾಂತಿಯಿಂದ  ಶ್ರೀಸಾಮಾನ್ಯನ ಮನೆ ಬಾಗಿಲಿಗೆ ತಂತ್ರಜ್ಞಾನ ಬಂದಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ,  ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಹೇಗಿರಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಮಾದರಿ ಸಂಶೋಧನಾ ಘಟಕವೊಂದನ್ನುಆರಂಭಿಸಬೇಕು  ಎಂದು ಇನ್ಫೋಸಿಸ್ ಸಹ ಅಧ್ಯಕ್ಷ ಮತ್ತು ಮಾಹಿತಿ ತಂತ್ರಜ್ಞಾನ ಮುನ್ನೋಟ ತಂಡದ ಅಧ್ಯಕ್ಷ ಎಸ್. ಗೋಪಾಲಕೃಷ್ಣನ್ ಸಲಹೆ ನೀಡಿದರು.

ಈ ಘಟಕವು ತಂತ್ರಜ್ಞಾನ ಆಧಾರಿತ ಸೇವೆಗಳು, ಉತ್ಪನ್ನಗಳಿಗೆ ಪರಿಹಾರ ಒದಗಿಸಲಿದ್ದು, ಬೆಂಗಳೂರು ಈ ಘಟಕ ಸ್ಥಾಪನೆಗೆ ಸೂಕ್ತ ಸ್ಥಳವಾಗಿದೆ. ಭವಿಷ್ಯದಲ್ಲಿ ಈ ಘಟಕ ಇಡೀ ವಿಶ್ವಕ್ಕೆ ಮಹತ್ವದ ಕೊಡುಗೆ  ನೀಡಲಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.