ADVERTISEMENT

ಐ.ಟಿ: ರಾಜ್ಯದಲ್ಲಿ ಹೆಚ್ಚು ಹೂಡಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 19:30 IST
Last Updated 16 ಆಗಸ್ಟ್ 2016, 19:30 IST
ಐ.ಟಿ: ರಾಜ್ಯದಲ್ಲಿ ಹೆಚ್ಚು ಹೂಡಿಕೆ
ಐ.ಟಿ: ರಾಜ್ಯದಲ್ಲಿ ಹೆಚ್ಚು ಹೂಡಿಕೆ   

ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐ.ಟಿ.) ವಲಯಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಬಂಡವಾಳ ಆಕರ್ಷಿಸುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಗುಜರಾತ್‌ ಎರಡನೇ ಸ್ಥಾನ ಪಡೆದುಕೊಂಡಿದೆ.

ರಾಜ್ಯದ  ಐ.ಟಿ. ವಲಯದಲ್ಲಿ ಬಂಡವಾಳ ಹೂಡಿಕೆ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘವು (ಅಸೋಚಾಂ) ಹೇಳಿದೆ.

ಹಿಂದಿನ ಹಣಕಾಸು ವರ್ಷದಲ್ಲಿ (2015–16) ದೇಶದ ಮಾಹಿತಿ ತಂತ್ರಜ್ಞಾನ (ಐ.ಟಿ) ವಲಯದಲ್ಲಿ ಒಟ್ಟು ₹2.2 ಲಕ್ಷ ಕೋಟಿ ಹೂಡಿಕೆಯಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯದ ಪಾಲೇ ಶೇ ₹53,396 ಕೋಟಿಗಳಷ್ಟಿದೆ (ಶೇ 25).

2005–06ರಲ್ಲಿ ಐ.ಟಿ ವಲಯದಲ್ಲಿ ₹14,337 ಕೋಟಿ ಬಂಡವಾಳ ಹೂಡಿಕೆಯಾಗಿತ್ತು.
ದೇಶದಲ್ಲಿಯೂ ಐ.ಟಿ ವಲಯದ ಮೇಲೆ ಹೆಚ್ಚಿನ ಬಂಡವಾಳ ಹೂಡಿಕೆಯಾಗುತ್ತಿದೆ. 2005–06ರಲ್ಲಿ ₹46,200 ಕೋಟಿಗಳಷ್ಟಿತ್ತು. ಇದೀಗ 2015–16ರಲ್ಲಿ ₹2.2 ಲಕ್ಷ ಕೋಟಿಗಳಿಗೆ ತಲುಪಿದ್ದು, ಶೇ 17ರಷ್ಟು ಏರಿಕೆ ಕಂಡು ಬಂದಿದೆ ಎಂದು ‘ಅಸೋಚಾಂ’ನ ಆರ್ಥಿಕ ಸಂಶೋಧನಾ ಮಂಡಳಿಯ (ಎಇಆರ್‌ಬಿ) ವರದಿಯಲ್ಲಿ ತಿಳಿಸಲಾಗಿದೆ.

ಉತ್ತಮ ಕೈಗಾರಿಕಾ ಪರಿಸರ, ಕುಶಲ ಮಾನವ ಸಂಪನ್ಮೂಲದ ಲಭ್ಯತೆಯು ಕರ್ನಾಟಕವನ್ನು ಡಿಜಿಟಲ್‌ ಇಂಡಿಯಾದ ಕೇಂದ್ರವಾಗಿಸಿದ್ದು, ದೇಶದಲ್ಲಿಯೇ ಹೂಡಿಕೆಗೆ ಉತ್ತಮ ತಾಣವನ್ನಾಗಿ ಮಾಡಿದೆ ಅಸೋಚಾಂ ಪ್ರಧಾನ ಕಾರ್ಯದರ್ಶಿ ರಾವತ್ ಹೇಳಿದರು.

ಉತ್ತೇಜನ ಅಗತ್ಯ
‘ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೊಸ ಹೂಡಿಕೆದಾರರಿಗೆ ಸುಗಮ ವಹಿವಾಟು ನಡೆಸಲು ಪೂರಕ ವಾತಾವರಣ ಕಲ್ಪಿಸುವುದು, ಅಸ್ತಿತ್ವದಲ್ಲಿರುವ ಕೈಗಾರಿಕೆಗಳ ವಹಿವಾಟು ವೃದ್ಧಿಗೆ ಉತ್ತೇಜನ ನೀಡುವ ಬಗ್ಗೆ ರಾಜ್ಯ ಹೆಚ್ಚು ಗಮನ ನೀಡಬೇಕಾಗಿದೆ’ ಎಂದು  ಅಸೋಚಾಂ ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ರಾವತ್‌ ಅಭಿಪ್ರಾಯಪಟ್ಟಿದ್ದಾರೆ.

‘ತೆರಿಗೆ ವಿನಾಯ್ತಿ ಮತ್ತು ತಯಾರಿಕೆಗೆ ಉತ್ತೇಜನ ನೀಡುವುದರಿಂದ ಇನ್ನೂ ಹೆಚ್ಚಿನ ಬಂಡವಾಳ ಆಕರ್ಷಣೆ ಸಾಧ್ಯವಿದೆ. ಇದರಿಂದ ಗಮನಾರ್ಹ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯೂ ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT