ADVERTISEMENT

ಐಟಿ ರಿಟರ್ನ್ಸ್: ರೂ 5 ಲಕ್ಷದವರೆಗೆ ವಿನಾಯ್ತಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ನವದೆಹಲಿ (ಪಿಟಿಐ): ರೂ 5 ಲಕ್ಷದವರೆಗೆ ವರಮಾನ ಮಿತಿ ಹೊಂದಿರುವ ವೇತನ ವರ್ಗ ಪ್ರಸಕ್ತ ಹಣಕಾಸು ವರ್ಷದಿಂದ ಆದಾಯ ತೆರಿಗೆ ಲೆಕ್ಕಪತ್ರ (ಐಟಿ ರಿಟರ್ನ್ಸ್)  ಸಲ್ಲಿಸಬೇಕಾಗಿಲ್ಲ.

ಈ ಯೋಜನೆಯು 2011-12ನೇ ಸಾಲಿನ ಕಂದಾಯ ವರ್ಷದಿಂದ ಜಾರಿಗೆ ಬರಲಿದೆ. ಅಂದರೆ, ಯೋಜನೆ ವ್ಯಾಪ್ತಿಗೆ  ಬರುವ ವೇತನ ವರ್ಗ 2010-11ನೇ ಸಾಲಿನ ಹಣಕಾಸು ವರ್ಷದ ಐಟಿ ರಿಟರ್ನ್ಸ್ ಸಲ್ಲಿಸಬೇಕಾಗಿಲ್ಲ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ)  ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. 

ಆದಾಯ ತೆರಿಗೆ ವ್ಯಾಪ್ತಿಗೆ ಬರುವ ಸುಮಾರು 85 ಲಕ್ಷದಷ್ಟು ಉದ್ಯೋಗಿಗಳಿಗೆ ಇದರಿಂದ ಅನುಕೂಲ ವಾಗಲಿದ್ದು, ಐಟಿ ರಿಟರ್ನ್ಸ್ ಸಲ್ಲಿಸುವ ಹೊರೆ ತಪ್ಪಲಿದೆ. ಉದ್ಯೋಗಿಯೊಬ್ಬನ ವೇತನ ಮತ್ತು ಬಡ್ಡಿ ಆದಾಯ ಸೇರಿ ಒಟ್ಟು ್ಙ 5 ಲಕ್ಷವನ್ನು ಮೀರದಿದ್ದಲ್ಲಿ ಆತ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸಬೇಕಾಗಿಲ್ಲ ಎಂದು ಕೇಂದ್ರ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಆದರೆ, ಮನೆ, ಆಸ್ತಿ, ಮೂಲ ಗಳಿಕೆ, ವೃತ್ತಿ ಗಳಿಕೆ, ವ್ಯವಹಾರ ಸೇರಿದಂತೆ ಇತರೆ ಮೂಲಗಳಿಂದ ಬರುವ ವರಮಾನ ಈ ವಿನಾಯ್ತಿ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಅವರು ಹೇಳಿದರು.

2010-11ನೇ ಸಾಲಿನ ಆದಾಯ ತೆರಿಗೆ ಮರು ಪಾವತಿ (ರಿಫಂಡ್) ಬಯಸುವರು, ಐಟಿ ರಿಟರ್ನ್ಸ್ ಸಲ್ಲಿಸುವಂತೆ `ಸಿಬಿಡಿಟಿ~ ಸೂಚಿಸಿದೆ. 2011ನೇ ಸಾಲಿನ ಹಣಕಾಸು ಮಸೂದೆಗೆ ಸಂಬಂಧಿಸಿದಂತೆ ಸಲ್ಲಿಸಿದ ಟಿಪ್ಪಣಿಯಂತೆ ತೆರಿಗೆಯಿಂದ ವಿನಾಯ್ತಿ ಪಡೆಯುವ ವೇತನ ವರ್ಗದ ಪಟ್ಟಿಯನ್ನು ಸರ್ಕಾರ  ಶೀಘ್ರದಲ್ಲೇ ಪ್ರಕಟಿಸಲಿದೆ. ಹೊಸ ಯೋಜನೆಯಲ್ಲಿ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯಿಂದ ವಿನಾಯ್ತಿ ಬಯಸುವ ಉದ್ಯೋಗಿ, ತೆರಿಗೆ ಕಡಿತಕ್ಕಾಗಿ  ತನಗೆ ಬರುವ ಲಾಭಾಂಶ, ಬಡ್ಡಿ ಸೇರಿದಂತೆ ಇತರೆ ವರಮಾನ ಮೂಲಗಳ ವಿವರವನ್ನು ತನ್ನ  ಕಂಪೆನಿಗೆ ಸಲ್ಲಿಸಬೇಕಾಗಿದೆ. ಸದ್ಯ 1961ರ ಆದಾಯ ತೆರಿಗೆ ಕಾಯ್ದೆಯಂತೆ, ಎಲ್ಲ ನೌಕರಸ್ಥರಿಗೆ ರಿಟರ್ನ್ಸ್ ಸಲ್ಲಿಸಲು ನಮೂನೆ-16ನ್ನು ನೀಡಲಾಗುತ್ತದೆ. ಬೇರೆ ಮೂಲಗಳಿಂದ ಆದಾಯ ಇಲ್ಲದ ಉದ್ಯೋಗಿಗಳು ರಿಟರ್ನ್ಸ್ ಸಲ್ಲಿಸಬೇಕಾಗಿಲ್ಲ ಎನ್ನುವುದು  ಹೊಸ ಯೋಜನೆಯ ಹಿಂದಿರುವ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.