ADVERTISEMENT

ಐ.ಟಿ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ

ದೇಸಿ ಸಾಫ್ಟ್‌ವೇರ್ ರಂಗದಲ್ಲಿ ಕ್ರಮೇಣ ನಿಜವಾಗುತ್ತಿರುವ ಆತಂಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಐ.ಟಿ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ
ಐ.ಟಿ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ   

-ಫುರ್ಖಾನ್‌ ಮೊಹರಕಾನ್‌

**

ಬೆಂಗಳೂರು: ದೇಶಿ ಐ.ಟಿ ಉದ್ದಿಮೆಗಳಲ್ಲಿ ಉದ್ಯೋಗ ಅವಕಾಶಗಳು ಕಡಿತಗೊಳ್ಳುತ್ತಿವೆ ಎನ್ನುವ ಆತಂಕ ನಿಧಾನವಾಗಿ ಅನುಭವಕ್ಕೆ ಬರುತ್ತಿದೆ.

ADVERTISEMENT

ಬೆಂಗಳೂರಿನ ಎರಡು ಮುಂಚೂಣಿ ಸಂಸ್ಥೆಗಳಾದ ಇನ್ಫೊಸಿಸ್‌ ಮತ್ತು ವಿಪ್ರೊ, ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಇದುವರೆಗೆ ಶೇ 1ರಷ್ಟು ಉದ್ಯೋಗ ಕಡಿತ ಮಾಡಿವೆ. ವಿಶ್ವದಾದ್ಯಂತ ಐ.ಟಿ ವೆಚ್ಚ ಕಡಿಮೆಯಾಗಿರುವುದರಿಂದ ಈ ಎರಡೂ ಸಂಸ್ಥೆಗಳು ಏ‍ಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಒಟ್ಟಾರೆ 3,646 ಸಾಫ್ಟ್‌ವೇರ್‌ ಎಂಜಿನಿಯರುಗಳನ್ನು ಕೈಬಿಟ್ಟಿವೆ.

ದ್ವಿತೀಯ ತ್ರೈಮಾಸಿಕದಲ್ಲಿ ವಿಪ್ರೊ ತನ್ನ ಸಿಬ್ಬಂದಿ ಸಂಖ್ಯೆಯನ್ನು ಶೇ 1.82ರಷ್ಟು ಕಡಿಮೆ ಮಾಡಿದೆ. ಆರು ತಿಂಗಳಲ್ಲಿ ವಿಪ್ರೊ 1,722 ಮತ್ತು ಇನ್ಫೊಸಿಸ್‌ 1,924 ಎಂಜಿನಿಯರುಗಳನ್ನು ಮನೆಗೆ ಕಳಿಸಿವೆ. ಇವೆರಡೂ ಸಂಸ್ಥೆಗಳು ಷೇರುಪೇಟೆಗೆ ಈ ಮಾಹಿತಿ ಸಲ್ಲಿಸಿವೆ.

‘ಪ್ರತಿಯೊಬ್ಬ ಸಿಬ್ಬಂದಿಯ ಕಾರ್ಯದಕ್ಷತೆ ಹೆಚ್ಚುತ್ತಿದೆ.  ಪ್ರತಿ ಸಿಬ್ಬಂದಿಯ ವರಮಾನವು ಗಮನಾರ್ಹ ಏರಿಕೆ ಕಾಣುತ್ತಿರುವಾಗ ಸಿಬ್ಬಂದಿ ಕಡಿತ ಸಮರ್ಥನೀಯವಾಗಿದೆ’ ಎಂದು ಇನ್ಫೊಸಿಸ್‌ನ ಮುಖ್ಯ ಹಣಕಾಸು ಅಧಿಕಾರಿ ಎಂ. ಡಿ. ರಂಗನಾಥ ಅವರು ಪ್ರತಿಕ್ರಿಯಿಸಿದ್ದಾರೆ.

‘ಹಿಂದಿನ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಸಂಸ್ಥೆಯ ಸಿಬ್ಬಂದಿಯಲ್ಲಿ ಶೇ 0.7ರಷ್ಟು ಕಡಿಮೆಯಾಗಿದ್ದರೂ, ವರಮಾನವು ಶೇ 5.7ರಷ್ಟು ಹೆಚ್ಚಳಗೊಂಡಿದೆ’ ಎಂದು ಹೇಳಿದ್ದಾರೆ.

ದ್ವೀತಿಯ ತ್ರೈಮಾಸಿಕದಲ್ಲಿಯೇ ವಿಪ್ರೊ 3,031 ಸಿಬ್ಬಂದಿ ಕೈಬಿಟ್ಟಿದೆ. ಪ್ರಸಕ್ತ ವರ್ಷ ಇನ್ಫೊಸಿಸ್‌ನ ಸಿಬ್ಬಂದಿ ಸಂಖ್ಯೆ 2,00,364 ರಿಂದ 1,98,440ಕ್ಕೆ ಇಳಿದಿದೆ.

ಟಿಸಿಎಸ್‌ನಲ್ಲಿ ಹೆಚ್ಚಳ: ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯಾಗಿರುವ ಟಿಸಿಎಸ್‌, ದ್ವಿತೀಯ ತ್ರೈಮಾಸಿಕದಲ್ಲಿ 1,990 ಎಂಜಿನಿಯರುಗಳನ್ನು ಹೊಸದಾಗಿ ನೇಮಿಸಿಕೊಂಡಿದೆ. ಅದರ ಒಟ್ಟಾರೆ ಸಿಬ್ಬಂದಿ ಸಂಖ್ಯೆ 3,89,213 ಕ್ಕೆ ತಲುಪಿದೆ. ನಾಲ್ಕನೇ ಅತಿದೊಡ್ಡ ಐ.ಟಿ ಸಂಸ್ಥೆಯಾಗಿರುವ ಎಚ್‌ಸಿಎಲ್‌ ಟೆಕ್ನಾಲಜೀಸ್‌ ತನ್ನ ಸಿಬ್ಬಂದಿ ಸಂಖ್ಯೆಯನ್ನು ಶೇ 2.64ರಷ್ಟು ಹೆಚ್ಚಿಸಿದೆ. 6 ತಿಂಗಳಲ್ಲಿ ಸಂಸ್ಥೆಯು 3,067 ತಂತ್ರಜ್ಞರನ್ನು ನೇಮಿಸಿಕೊಂಡಿದೆ.

‘ಸಿಬ್ಬಂದಿ ಕಡಿತ ವಿದ್ಯಮಾನವು ಇನ್ನೂ ಎರಡು ವರ್ಷ ಹೀಗೆಯೇ ಮುಂದುವರೆಯಲಿದೆ. ಐ.ಟಿ ವಲಯಕ್ಕಿಂತ ಐ.ಟಿ ಸೇವಾ ವಲಯದಲ್ಲಿ ಸಿಬ್ಬಂದಿ ಕಡಿತ ಸಂಖ್ಯೆ ಹೆಚ್ಚಿಗೆ ಇರಲಿದೆ’ ಎಂದು ಹೆಡ್‌ ಹಂಟರ್ಸ್‌ ಇಂಡಿಯಾದ ಅಧ್ಯಕ್ಷ ಕ್ರಿಸ್‌ ಲಕ್ಷ್ಮೀಕಾಂತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.