ADVERTISEMENT

ಐದು ಖಾಸಗಿ ಬ್ಯಾಂಕ್: 15,000 ಸಿಬ್ಬಂದಿ ನೇಮಕ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ನವದೆಹಲಿ(ಪಿಟಿಐ):ಜಾಗತಿಕ ಆರ್ಥಿಕ ಹಿಂಜರಿತದ ಬಿಸಿ ಮರುಕಳಿಸಿದ ಪರಿಣಾಮ 2012ರಲ್ಲಿ ಹೊಸ ಉದ್ಯೋಗ ನೇಮಕ ಪ್ರಕ್ರಿಯೆ  ಅಷ್ಟೇನೂ ಚುರುಕಾಗಿರಲಿಲ್ಲ.  ಐಟಿ ಕಂಪೆನಿಗಳೂ ಕ್ಯಾಂಪಸ್ ಆಯ್ಕೆ ಕಡಿಮೆ ಮಾಡಿದ್ದವು.

ಇದ್ದುದರಲ್ಲಿಯೇ ಬ್ಯಾಂಕಿಂಗ್ ವಲಯದಲ್ಲಿ ಹೊಸ ಉದ್ಯೋಗಿಗಳ ನೇಮಕ ನಡೆದಿತ್ತು. ಅದರಲ್ಲೂ ಖಾಸಗಿ ಬ್ಯಾಂಕ್‌ಗಳು ಈ ಪ್ರಕ್ರಿಯೆಯಲ್ಲಿ ಚುರುಕಾಗಿದ್ದವು.
ಯೆಸ್ ಬ್ಯಾಂಕ್, ಕೋಟಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳು 15,823 ನೌಕರರನ್ನು 2012-13ನೇ ಹಣಕಾಸು ವರ್ಷದಲ್ಲಿ ನೇಮಕ ಮಾಡಿಕೊಂಡಿವೆ. ಪರಿಣಾಮ ಐದೂ ಬ್ಯಾಂಕ್‌ಗಳ ಒಟ್ಟಾರೆ ಸಿಬ್ಬಂದಿ ಸಂಖ್ಯೆ ಎರಡು ಲಕ್ಷ ಸಮೀಪಿಸಿದೆ.

ಹೊಸ ನೇಮಕದಿಂದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಸಿಬ್ಬಂದಿ ಸಾಮರ್ಥ್ಯವನ್ನು 69,065ಕ್ಕೆ ಹೆಚ್ಚಿಸಿಕೊಂಡಿದೆ. ಆಕ್ಸಿಸ್ ಬ್ಯಾಂಕ್ 6,163  ಮಂದಿ ನೇಮಕದೊಂದಿಗೆ ಹೊಸ ಉದ್ಯೋಗಿಗಳ ವಿಚಾರದಲ್ಲಿ ಉಳಿದ 4 ಖಾಸಗಿ ಬ್ಯಾಂಕ್‌ಗಳನ್ನು ಹಿಂದಿಕ್ಕಿದೆ(ಒಟ್ಟು ಸಾಮರ್ಥ್ಯ 37,901). ಐಸಿಐಸಿಐ ಬ್ಯಾಂಕ್ ಹೊಸದಾಗಿ 3789(ಒಟ್ಟು 62,065), ಯೆಸ್ ಬ್ಯಾಂಕ್ 1382, ಕೋಟಕ್ ಮಹೀಂದ್ರಾ  1500 ಸಿಬ್ಬಂದಿ ನೇಮಿಸಿಕೊಂಡಿವೆ.

442 `ಜಿಎಂ' ಅವಕಾಶ!
ಕೇಂದ್ರ ಸರ್ಕಾರದ ಒಡೆತನದಲ್ಲಿರುವ 19 ಬ್ಯಾಂಕ್‌ಗಳು ಒಟ್ಟು 442 ಮಂದಿ ಪ್ರಧಾನ ವ್ಯವಸ್ಥಾಪಕರನ್ನು (ಜಿ.ಎಂ) ಹೊಂದಬಹುದಾಗಿದೆ. 43 `ಜಿಎಂ'ಗಳನ್ನು ಹೊಂದಲು `ಬ್ಯಾಂಕ್ ಅಫ್ ಬರೋಡಾ'ಕ್ಕೆ ಅವಕಾಶವಿದೆ. ಕೇಂದ್ರ ಹಣಕಾಸು ಸಚಿವಾಲಯದ ಸುತ್ತೋಲೆಯಲ್ಲಿ ಈ ವಿಚಾರ ತಿಳಿಸಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ 41, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ತಲಾ 38 ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟು 29 `ಜಿಎಂ'ಗಳನ್ನು ಹೊಂದಬಹುದು ಎಂದಿದೆ ಸುತ್ತೋಲೆ.

ಈ `ಜಿಎಂ'ಗಳ ನೇಮಕ ಅವಕಾಶದ ಪಟ್ಟಿಯಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ `ಭಾರತೀಯ ಸ್ಟೇಟ್ ಬ್ಯಾಂಕ್' ಸೇರಿಲ್ಲ.
ವಾರ್ಷಿಕ ವಹಿವಾಟುರೂ1.5 ಲಕ್ಷ ಕೋಟಿ ದಾಟಿರುವ ಬ್ಯಾಂಕ್‌ಗಳಲ್ಲಿ 12 `ಜಿಎಂ' ಹುದ್ದೆಗೆ ಅವಕಾಶವಿದೆ. ನಂತರದ ಪ್ರತಿರೂ18,000 ಕೋಟಿ ವಹಿವಾಟಿಗೆ ತಲಾ ಒಂದು ಸ್ಥಾನದಂತೆರೂ4 ಲಕ್ಷ ಕೋಟಿ ವ್ಯವಹಾರದವರೆಗೂ ಜಿ.ಎಂ ಸ್ಥಾನವನ್ನು ಬ್ಯಾಂಕ್‌ಗಳು ಸೃಷ್ಟಿಸಿಕೊಳ್ಳಬಹುದು.

ವಾರ್ಷಿಕ ವಹಿವಾಟುರೂ4  ಲಕ್ಷ ಕೋಟಿ ದಾಟಿದ ನಂತರ ಪ್ರತಿರೂ24 ಸಾವಿರ ಕೋಟಿ ವ್ಯವಹಾರಕ್ಕೆ ತಲಾ ಒಬ್ಬರಂತೆ ಪ್ರಧಾನ ವ್ಯವಸ್ಥಾಪಕರನ್ನು ನೇಮಿಸಿಕೊಳ್ಳಬಹುದು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.