ADVERTISEMENT

ಕಚ್ಚಾ ತೈ ಲ:ಸರ್ಕಾರ ನಿಗಾ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 16:35 IST
Last Updated 2 ಫೆಬ್ರುವರಿ 2011, 16:35 IST

ನವದೆಹಲಿ (ಪಿಟಿಐ): ಈಜಿಪ್ಟ್ ರಾಜಕೀಯ ಬಿಕ್ಕಟ್ಟಿನಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ  ತೈಲ ಉತ್ಪಾದನೆ ಘಟಕಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರುವ ಸಾಧ್ಯತೆ ಇದ್ದು, ಸರ್ಕಾರ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.

‘ಅದೃಷ್ಟವಶಾತ್ ಇಂತಹ ಘಟನೆಗಳಿಂದ ಕಚ್ಚಾ ತೈಲದ ಬೆಲೆ ಮತ್ತೆ ಏರುವ ಸಾಧ್ಯತೆ ಇದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆಗಿರುವ ಬೆಳವಣಿಗೆಗಳು ಪ್ರಪಂಚದ ಇತರ ಭಾಗಗಳ ತೈಲ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಲಿದೆ. ತೈಲ ಉತ್ಪಾದನೆಯಲ್ಲಿ ಅನಿಶ್ಚಿತತೆ ಇರುವುದರಿಂದ ನಾವು ಈ ಕುರಿತು ನಿಗಾ ವಹಿಸುತ್ತಿದ್ದೇವೆ’ ಎಂದು ಪ್ರಣವ್ ಹೇಳಿದ್ದಾರೆ.

‘ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ  ಸಿದ್ದವಿದೆ. 2008ರಲ್ಲಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 147 ಡಾಲರ್ ತಲುಪಿದಾಗಲೂ ಭಾರತ ಇದನ್ನು ನಿಭಾಯಿಸಿದೆ’ ಎಂದು ಹೇಳಿದರು. 

ಬೆಲೆ ಏರಿಕೆ ಅನಿವಾರ್ಯ:  ‘ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಿರುವುದರಿಂದ ತೈಲ ಕಂಪೆನಿಗಳಿಗೆ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ’ ಎಂದು ಪ್ರಣವ್ ಮುಖರ್ಜಿ ಹೇಳಿದ್ದಾರೆ.

ತೈಲ ಮಾರಾಟ ಕಂಪೆನಿಗಳು ಹಣವನ್ನು ಕೊಳ್ಳೆ ಹೊಡೆಯುತ್ತಿಲ್ಲ. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 90 ಡಾಲರ್ ತಲುಪಿದೆ. 2008ರಲ್ಲಿ ಬ್ಯಾರಲ್‌ಗೆ 145 ಡಾಲರ್ ಇದ್ದಾಗ, ಪ್ರತಿ ಲೀಟರ್ ಪೆಟ್ರೋಲ್‌ನ ಬೆಲೆ ರೂ 52 ದರದಲ್ಲಿ ಮಾರಾಟವಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಭಿನ್ನವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ರೂ 60 ದರದಲ್ಲಿ ಮಾರಾಟವಾಗುತ್ತಿದೆ ಎಂದರು.

ಕಚ್ಚಾ ತೈಲದ ಬೆಲೆಗೆ ತಕ್ಕಂತೆ ದೇಶೀಯ ಮಾರುಕಟ್ಟೆಯಲ್ಲಿ ದರ ನಿಗದಿಪಡಿಸಲು ಪೆಟ್ರೋಲ್ ದರವನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಲಾಗಿದೆ. 2010ರಲ್ಲಿ 5 ಬಾರಿ ತೈಲ ಬೆಲೆ ಏರಿಕೆ ಮಾಡಲಾಗಿದೆ. ತೈಲವನ್ನು ಖರೀದಿ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡಿದರೆ, ಈ ಹಣಕಾಸು ವರ್ಷದಲ್ಲಿ ಕಂಪೆನಿಗಳಿಗೆ ರೂ 65 ಸಾವಿರ ಕೋಟಿ ನಷ್ಟವಾಗಲಿದೆ ಎಂದು ಪ್ರಣವ್ ಹೇಳಿದ್ದಾರೆ. ಈ ನಡುವೆ ತೈಲ ಮಾರಾಟ ಕಂಪೆನಿಗಳಿಗೆ ಇನ್ನೂ ಹೆಚ್ಚಿನ ಸಹಾಯಧನ ನೀಡುವುದು ಅಸಾಧ್ಯ ಎಂದೂ ಸ್ಪಷ್ಟಪಡಿಸಿದ್ದಾರೆ.

ಅಸಮಧಾನ: ಇರಾನ್ ಕಚ್ಚಾ ತೈಲ ಪಾವತಿ ಸಮಸ್ಯೆಯನ್ನು ಇತ್ಯರ್ಥಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಸರಿಸುತ್ತಿರುವ ನಡೆ ಒಟ್ಟಾರೆ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.

ಒಂಬತ್ತು ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ನಿರ್ವಹಿಸುವ ಏಷ್ಯನ್ ಕ್ಲಿಯರಿಂಗ್ ಯೂನಿಯನ್ (ಎಯುಸಿ) ವ್ಯವಸ್ಥೆಯ ಮೂಲಕ ಹಣ ಪಾವತಿ ಮಾಡಬಾರದು ಎಂದು ‘ಆರ್‌ಬಿಐ’ ಕಳೆದ ಡಿಸೆಂಬರ್ 23ರಂದು ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ತೈಲ ಪಾವತಿ ಸಮಸ್ಯೆ ತಲೆದೋರಿದೆ.

‘ಆರ್‌ಬಿಐ’  ನಡೆಯಿಂದ ಭಾರತ ಮತ್ತು ಇರಾನ್ ನಡುವೆ 13.4 ಶತಕೋಟಿ ಡಾಲರ್ ಮೊತ್ತದ ಕಚ್ಚಾ ತೈಲ ವಹಿವಾಟಿಗೆ ಹಿನ್ನಡೆ ಉಂಟಾಗಿದೆ. ಇದರಿಂದ ಎರಡೂ ದೇಶಗಳ ಆಮದು ಮತ್ತು ರಫ್ತಿಗೆ ತೊಂದರೆಯಾಗಿದೆ ಎಂದು ಖುಲ್ಲರ್ ಹೇಳಿದ್ದಾರೆ.

ಭಾರತ ಮತ್ತು ಇರಾನ್ ನಡುವಣ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಕಳೆದ ವರ್ಷ 13.39 ಶತಕೋಟಿ ಡಾಲರ್ ತಲುಪಿದ್ದು, ಸೌದಿ ಅರೇಬಿಯಾ ಹೊರತುಪಡಿಸಿದರೆ ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಸುವ ಎರಡನೆಯ ದೇಶ ಇರಾನ್ ಆಗಿದೆ. ತಿಂಗಳಿಗೆ 1 ಶತಕೋಟಿ ಡಾಲರ್ ಮೊತ್ತದ ತೈಲವನ್ನು ಭಾರತ ಇರಾನಿನಿಂದ ಆಮದು ಮಾಡಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.