ADVERTISEMENT

ಕಠಿಣ ಹಣಕಾಸು ನೀತಿ: ಆರ್ಥಿಕ ವೃದ್ಧಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 19:30 IST
Last Updated 17 ಜೂನ್ 2011, 19:30 IST

ನವದೆಹಲಿ (ಪಿಟಿಐ): `ಭಾರತೀಯ ರಿಸರ್ವ್ ಬ್ಯಾಂಕ್‌ನ ಕಠಿಣ ಸ್ವರೂಪದ ಹಣಕಾಸು ನೀತಿಗಳು  ಅಲ್ಪಾವಧಿಯಲ್ಲಿ ಆರ್ಥಿಕ ವೃದ್ಧಿ ದರ ಕುಂಠಿತಗೊಳಿಸಲಿವೆ~   ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರೀಯ ಬ್ಯಾಂಕ್‌ನ ಕಠಿಣ ಹಣಕಾಸು ನೀತಿಯು ಇದೇ ರೀತಿ ಮುಂದುವರೆದರೆ ಅಲ್ಪಾವಧಿಯಲ್ಲಿ ಆರ್ಥಿಕ ವೃದ್ಧಿ ದರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದು. ಅಲ್ಪಾವಧಿಯಲ್ಲಿ ದುಬಾರಿ ಬ್ಯಾಂಕ್ ಬಡ್ಡಿ ದರಗಳು ಅಭಿವೃದ್ಧಿ ಓಟಕ್ಕೆ ಅಡ್ಡಿಯಾದರೂ, ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆ ಗತಿಯು ಚೇತರಿಕೆಯ ಹಾದಿಯಲ್ಲಿಯೇ ಇರಲಿದೆ. ಬೆಲೆಗಳ ಹೆಚ್ಚಳಕ್ಕೆ ಕಡಿವಾಣ ವಿಧಿಸುವುದೇ ಸದ್ಯದ ಪ್ರಮುಖ ಸವಾಲಾಗಿದೆ ಎಂದರು. ಹಣಕಾಸು ನೀತಿ ಕ್ರಮೇಣ ಕಠಿಣಗೊಳ್ಳುತ್ತಲೇ ಸಾಗಿದೆ. ಇನ್ನಷ್ಟು ದಿನಗಳ ಕಾಲ ಈ ವಿದ್ಯಮಾನ ಇದೇ ರೀತಿ ಮುಂದುವರೆದರೆ ಅದರಿಂದ ಆರ್ಥಿಕ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ.

ಅಲ್ಪಾವಧಿಯಲ್ಲಿ ಬೇಡಿಕೆ ತಗ್ಗಿಸಿ ಹಣದುಬ್ಬರ ನಿಯಂತ್ರಿಸಬೇಕಾಗಿರುವುದು ಸದ್ಯದ ಸವಾಲಾಗಿದೆ. ಅಂತರರಾಷ್ಟ್ರೀಯ ಗರಿಷ್ಠ ಮಟ್ಟದ ಬೆಲೆಗಳ ಮಟ್ಟ ಮತ್ತು ದೇಶದಲ್ಲಿನ ಬೇಡಿಕೆ ಮತ್ತು ಪೂರೈಕೆ ಅಸಮತೋಲನವು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದರು.

ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘ (ಅಸೋಚಾಂ) ಶುಕ್ರವಾರ  ಇಲ್ಲಿ ಏರ್ಪಡಿಸಿದ್ದ ಬ್ಯಾಂಕ್ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.  ಇತ್ತೀಚೆಗೆ ಕೈಗಾರಿಕಾ ಉತ್ಪಾದನೆಯು ಕುಂಠಿತಗೊಂಡಿದ್ದರೂ, ಆರ್ಥಿಕ ವೃದ್ಧಿ ದರದ ಗುರಿ ತಲುಪುವ ಬಗ್ಗೆ ಪ್ರಣವ್ ಈಗಲೂ ಆಶಾವಾದಿಯಾಗಿದ್ದಾರೆ.

ಹಣದುಬ್ಬರವು ಆರ್ಥಿಕ ವೃದ್ಧಿ ಸುಸ್ಥಿರತೆ ಮೇಲೆ ಪರಿಣಾಮ ಬೀರುತ್ತಿದ್ದರೂ, ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿಗಳು ಈಗಲೂ ಸದೃಢವಾಗಿವೆ. ಹೀಗಾಗಿ 2010-11ರ ಆರ್ಥಿಕ ವೃದ್ಧಿಯ ದರವನ್ನೇ (ಶೇ 8.5) 2011-12ರಲ್ಲಿಯೂ ಈಡೇರುವ ಸಾಧ್ಯತೆಗಳು ಇವೆ. ಈ ಹಂತದಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಳ್ಳುವ ಅಗತ್ಯ ಇದೆ. ವಿತ್ತೀಯ ಕೊರತೆಯು ಗರಿಷ್ಠ ಪ್ರಮಾಣದಲ್ಲಿ ಮುಂದುವರೆದರೆ ಅದರಿಂದ ಅರ್ಥ ವ್ಯವಸ್ಥೆಗೆ ಹಾನಿ ಉಂಟಾಗಲಿದೆ ಎಂದರು.

ಬಡ್ಡಿ ದರಗಳನ್ನು ಮತ್ತಷ್ಟು ಹೆಚ್ಚಿಸುವ ಆಲೋಚನೆ ಕೈಬಿಡಬೇಕು ಎಂದು ಕೈಗಾರಿಕಾ ರಂಗವು ಕೇಂದ್ರೀಯ ಬ್ಯಾಂಕ್‌ಗೆ ಒತ್ತಾಯಿಸುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.