ADVERTISEMENT

ಕಬ್ಬಿಗೆ ಕನಿಷ್ಠ ಬೆಲೆ: ಸಿಎಂ ಆದೇಶಕ್ಕೂ ಬೆಲೆ ಇಲ್ಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ದಾವಣಗೆರೆ: ಟನ್ ಕಬ್ಬಿಗೆ ಕನಿಷ್ಠ ರೂ 2 ಸಾವಿರ ದರ ನೀಡಬೇಕು ಎಂಬ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಆದೇಶಕ್ಕೆ ಬಹುತೇಕ ಸಕ್ಕರೆ ಕಾರ್ಖಾನೆಗಳು `ಬೆಲೆ~ ನೀಡಿಲ್ಲ. ಇದರಿಂದಾಗಿ ರೈತರು ಸಾವಿರಾರು ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಅವರು, ಕೆಲ ತಿಂಗಳ ಹಿಂದೆ ಟನ್ ಕಬ್ಬಿಗೆ ರೂ 2 ಸಾವಿರ ನಿಗದಿಪಡಿಸಿ ಆದೇಶಿಸಿದ್ದರು. ಇದರಿಂದ ಬೆಳೆಗಾರ ಸಮೂಹ ಸಮಾಧಾನಪಟ್ಟಿತ್ತು. ಆದರೆ, ನಿಗದಿಗಿಂತ ಕಡಿಮೆ ದರ ದೊರೆಯುತ್ತಿದೆ ಎಂಬ ದೂರು ರೈತರಿಂದ ಕೇಳಿಬರುತ್ತಿದೆ.

ರಾಜ್ಯದಲ್ಲಿ ಸುಮಾರು 56 ಸಕ್ಕರೆ ಕಾರ್ಖಾನೆಗಳು ವರ್ಷಕ್ಕೆ ಸರಾಸರಿ 330 ಲಕ್ಷ ಟನ್ ಕಬ್ಬು ಅರೆಯುತ್ತವೆ. ಈ ಬಾರಿ ಈಗಾಗಲೇ 250 ಲಕ್ಷ ಟನ್ ಕಬ್ಬು ಅರೆಯಲಾಗಿದೆ. ಪ್ರತಿ ಟನ್‌ಗೆ ರೂ 2 ಸಾವಿರ ಬದಲಿಗೆ ರೂ1,700 ಅಥವಾ ರೂ 1,800 ದರ ಮಾತ್ರ ನೀಡುತ್ತಿವೆ. ಕಾರ್ಖಾನೆಗಳಿಗೆ ಪ್ರತಿ ಟನ್‌ಗೆ ರೂ 200 ಉಳಿತಾಯ ಆಗುತ್ತಿದೆ.
 
ರೈತರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಸಕ್ಕರೆ ಖಾತೆ ಸಚಿವ ಎಸ್.ಎ. ರವೀಂದ್ರನಾಥ್ ಅವರ ಜಿಲ್ಲೆ ದಾವಣಗೆರೆಯಲ್ಲಿಯೂ ಸರ್ಕಾರದ ಆದೇಶ ಸಮರ್ಪಕವಾಗಿ ಪಾಲನೆ ಆಗುತ್ತಿಲ್ಲ. ಈ ವರ್ಷ ಕಬ್ಬು ಅರೆಯುವಿಕೆ ಮುಗಿಯುತ್ತಾ ಬಂದಿದ್ದರೂ ಎಷ್ಟೋ ಕಾರ್ಖಾನೆಗಳು ಕಳೆದ ವರ್ಷದ ಬಾಕಿ ಸಹ ನೀಡಿಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸುತ್ತಾರೆ.

ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆ ದರ ನಿಗದಿಯಾಗಿದೆ. 2011-12ನೇ ಸಾಲಿನಲ್ಲಿ ಉತ್ತರ ಪ್ರದೇಶದಲ್ಲಿ ಶೇ 8.5 ಸಕ್ಕರೆ ಇಳುವರಿ ದೊರೆಯುವ ಕಬ್ಬಿಗೆ ಪ್ರತಿ ಟನ್‌ಗೆ ರೂ 2,500, ಪಂಜಾಬ್‌ನಲ್ಲಿ ರೂ 2,400, ಹರಿಯಾಣದಲ್ಲಿ ರೂ 2,450, ಆಂಧ್ರ ಪ್ರದೇಶದಲ್ಲಿ ರೂ 2,200 ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಕೆ.ಜಿ. ಸಕ್ಕರೆ ಸರಾಸರಿ ರೂ 35ಕ್ಕೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಬೆಳೆಯುವ ಕಬ್ಬಿನಲ್ಲಿ ಸಕ್ಕರೆ ಇಳುವರಿಯು ಸರಾಸರಿ ಶೇ. 10.5ರಷ್ಟಿದ್ದರೂ, ಸರ್ಕಾರವು ಮುಂಗಡವಾಗಿ ರೂ 2ಸಾವಿರ ನೀಡುವಂತೆ ಸೂಚಿಸಿದ್ದರೂ ಬಹುತೇಕ ಕಾರ್ಖಾನೆಗಳು ರೈತರನ್ನು ವಂಚಿಸುತ್ತಿವೆ ಎಂದು ಆರೋಪಿಸುತ್ತಾರೆ.

ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಸಕ್ಕರೆ ನಿರ್ದೇಶಕ ಸತ್ಯಮೂರ್ತಿ, `ಮುಖ್ಯಮಂತ್ರಿ ಅವರು ದರ ನಿಗದಿಪಡಿಸಿ ಕಾರ್ಖಾನೆಗಳಿಗೆ ಆದೇಶ ಮಾಡಿದ್ದಾರೆ.  ತಮಗೆ ಕಡಿಮೆ ದರ ಸಿಗುತ್ತಿದೆ ಎಂಬುದನ್ನು ರೈತರು ನಮ್ಮ ಗಮನಕ್ಕೆ ತಂದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.