ADVERTISEMENT

ಕಾಣದ ಸುನಾಮಿ ಭೀತಿ?

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 16:20 IST
Last Updated 13 ಮಾರ್ಚ್ 2011, 16:20 IST

ನವದೆಹಲಿ (ಪಿಟಿಐ): ತಿಂಗಳ ಹಣದುಬ್ಬರ ಅಂಕಿಅಂಶ, ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿಯ ಮಧ್ಯಂತರ   ಪರಾಮರ್ಶೆ ಮತ್ತು ಮುಂಗಡ ತೆರಿಗೆ ಪಾವತಪ್ರಮಾಆಣವು ಷೇರುಪೇಟೆಯ ಮುಂದಿನ ವಹಿವಾಟಿನ ಗತಿ ನಿರ್ಧರಿಸಲಿವೆ.ಜಪಾನ್‌ನಲ್ಲಿ ಸಂಭವಿಸಿರುವ ‘ಸುನಾಮಿ’   ಧಿಡೀರನೆ ಈ ಸಂಗತಿಗಳ ದಿಕ್ಕು ತಪ್ಪಿಸಿತ್ತು. ಮತ್ತೆ ಅವೇ ಸಂಗತಿಗಳೇ ಈ ವಾರದ ವಹಿವಾಟಿನ ಗತಿ  ನಿರ್ಧರಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರಕ್ಕೆ ಹೋಲಿಸಿದರೆ ಷೇರುಪೇಟೆ ಸಂವೇದಿ ಸೂಚ್ಯಂಕವು 312 ಅಂಶಗಳಷ್ಟು ಇಳಿಕೆ ದಾಖಲಿಸಿದೆ. ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಬೆಳವಣಿಗೆಗಳು, ಲಿಬಿಯಾದಲ್ಲಿ ಮುಂದುವರೆದಿರುವ ಬಿಕ್ಕಟ್ಟು, ಜಪಾನ್ ಮತ್ತು ಅಮೆರಿಕದಲ್ಲಿ ಆರ್ಥಿಕತೆ ಕುಸಿಯುತ್ತಿರುವ ವಿದ್ಯಮಾನಗಳು ಒಟ್ಟಾರೆ  ಪೇಟೆ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದವು.

ಜಪಾನ್‌ನಲ್ಲಿ ‘ಸುನಾಮಿ’ ದೊಡ್ಡ ಪ್ರಮಾಣ ಹಾನಿ ಉಂಟುಮಾಡಿದರೂ, ಇದರ ತಕ್ಷಣ ಪರಿಣಾಮ ಮುಂಬೈ ಷೇರುಪೇಟೆಯ ಮೇಲೆ ಆಗಿಲ್ಲ. ಮುಂದಿನ ವಾರದ ವಹಿವಾಟಿನ ಹೊತ್ತಿಗೆ ‘ಸುನಾಮಿ’ ಪ್ರಭಾವ ತಗ್ಗಲಿದೆ  ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

‘ಸುನಾಮಿ’ಯಿಂದ ಜಪಾನಿನಲ್ಲಿ ಬಂಡವಾಳ ಹೂಡಿರುವ ಭಾರತೀಯ ಕಂಪೆನಿಗಳ ಷೇರುಗಳ ಬೆಲೆಗಳಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸವೇನೂ ಆಗಿಲ್ಲ. ಅಲ್ಲಿನ ಕಂಪೆನಿಗಳು ಸುನಾಮಿಯಿಂದ ಆಗಿರುವ ನಷ್ಟದ ಪ್ರಮಾಣವನ್ನು ಪ್ರಕಟಿಸುತ್ತಿದ್ದಂತೆ ಇಲ್ಲಿ ಕೆಲವರು ಷೇರುಗಳ ಮಾರಾಟಕ್ಕೆ ಮುಂದಾಗಲಿದ್ದಾರೆ ಎಂದು ‘ಜಿಯೋಜಿತ್ ಬಿಎನ್‌ಪಿ’ ಹಣಕಾಸು ಸೇವೆಗಳ ಸಂಶೋಧನೆ ಮುಖ್ಯಸ್ಥ ಅಲೆಕ್ಸ್ ಮ್ಯಾಥ್ಯೂಸ್ ಹೇಳಿದ್ದಾರೆ.

ಸದ್ಯಕ್ಕೆ ಮಾರುಕಟ್ಟೆ ವೀಕ್ಷಕರು ದೇಶೀಯ ಆರ್ಥಿಕ ಪ್ರಗತಿಯ ವಿದ್ಯಮಾನವನ್ನು  ಮಾತ್ರ ಮುಖ್ಯವಾಗಿ ಅವಲೋಕಿಸುತ್ತಿದ್ದಾರೆ. ರಫ್ತು ಸಂಗ್ರಹ ಹೆಚ್ಚಿರುವುದು, ಆಹಾರ ಹಣದುಬ್ಬರ ದರ ನಿಧಾನವಾಗಿ ಕುಸಿಯುತ್ತಿರುವುದು  ಹೂಡಿಕೆಗೆ ಉತ್ತೇಜನ ಕಲ್ಪಿಸಿದೆ. ಮುಂದಿನ ವಾರ ‘ಆರ್‌ಬಿಐ’ ಪ್ರಕಟಿಸಲಿರುವ ಹಣಕಾಸು ನೀತಿಯ ಮಧ್ಯಂತರ   ಪರಾಮರ್ಶೆ ಕೂಡ ಹೂಡಿಕೆದಾರರ ಪಾಲಿಗೆ ಮಹತ್ವದ್ದು ಆಗಿರಲಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಕಂಡರೆ ಪೇಟೆ ವಹಿವಾಟು ಮತ್ತಷ್ಟು ಚುರುಕುಗೊಳ್ಳಲಿದೆ ಎಂದೂ ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.