ADVERTISEMENT

ಕಾಫಿ ನಾಡಿನಲ್ಲಿ ಚಾಕ್ಲೆಟ್ ಕಂಪು

ಸಿ.ಎಸ್.ಸುರೇಶ್
Published 8 ಮೇ 2012, 19:30 IST
Last Updated 8 ಮೇ 2012, 19:30 IST
ಕಾಫಿ ನಾಡಿನಲ್ಲಿ ಚಾಕ್ಲೆಟ್ ಕಂಪು
ಕಾಫಿ ನಾಡಿನಲ್ಲಿ ಚಾಕ್ಲೆಟ್ ಕಂಪು   

ಕೊಡಗು ಜಿಲ್ಲೆಯ ಕಕ್ಕಬ್ಬೆ ಬಳಿಯ ಯವಕಪಾಡಿ ಗ್ರಾಮದ ಈ ಕಾಫಿ ಬೆಳೆಗಾರ್ತಿಯ ಮನೆ ತುಂಬಾ ಚಾಕ್ಲೆಟ್!

ಏಳು ವರ್ಷ ಉಪನ್ಯಾಸಕಿಯಾಗಿದ್ದು, ಬಳಿಕ ರಾಜಿನಾಮೆ ನೀಡಿದ ಯವಕಪಾಡಿಯ ಕೇಟೋಳಿರ ಫ್ಯಾನ್ಸಿ ಗಣಪತಿ, ಹವ್ಯಾಸವಾಗಿ ಆರಂಭಿಸಿದ ಚಾಕ್ಲೆಟ್ ತಯಾರಿಕೆ ಈಗ ಗ್ರಾಮೀಣ ಪ್ರದೇಶದಲ್ಲಿ ಪುಟ್ಟ ಉದ್ಯಮವಾಗಿ ರೂಪುಗೊಂಡಿದೆ. ಜಿಲ್ಲೆಯಲ್ಲಿ ಗಮನ ಸೆಳೆದಿದೆ.

ಫ್ಯಾನ್ಸಿ ಗಣಪತಿ ಅವರಿಗೆ ಚಿಕ್ಕಂದಿನಿಂದಲೇ ಚಾಕ್ಲೆಟ್ ತಯಾರಿಕೆ ಕನಸು. ಪ್ರೌಢಶಾಲೆಯಲ್ಲಿದ್ದಾಗಲೇ ತಾಯಿಯಿಂದ ಮನೆಯಲ್ಲಿ ಚಾಕ್ಲೆಟ್ ತಯಾರಿಯ ಕಲಿಕೆ ಆರಂಭ. ಕೊಕೊ ಪೌಡರ್, ಮತ್ತಿತರ ಕಚ್ಚಾ ವಸ್ತು ಬಳಸಿ ಹವ್ಯಾಸವಾಗಿ ಆರಂಭಿಸಿದ ಚಾಕ್ಲೆಟ್ ತಯಾರಿ ಈಗ ಜಿಲ್ಲೆಯಲ್ಲಿ ಬೇಡಿಕೆ ಪಡೆದುಕೊಂಡಿದೆ.

ADVERTISEMENT

ಕಾಫಿ ಉದ್ಯಮದಲ್ಲಿ ಏರಿಳಿತ ಕಾಣತೊಡಗಿದಾಗ ಆರ್ಥಿಕವಾಗಿ ಸದೃಢರಾಗಲು ಚಾಕ್ಲೆಟ್ ತಯಾರಿಗೆ ಮನಸು ಮಾಡಿದರು. ತಮಿಳುನಾಡಿನ ಪರಿಚಿತರೊಬ್ಬರಿಗೆ ತಾವು ತಯಾರಿಸಿದ ಉಪ್ಪಿನಕಾಯಿಯನ್ನು ಕಳುಹಿಸಿಕೊಟ್ಟಾಗ ಅವರಿಂದ ಫ್ಯಾನ್ಸಿ ಗಣಪತಿಗೆ ಚಾಕ್ಲೆಟ್ ತಯಾರಿಕೆ ಬಗ್ಗೆ ಕಲಿಕೆ.

ಉದ್ಯಮಿಗಳಾದ ಚೆನ್ನೈನ ಅನಿತಾ ಕಟಾರಿಯಾ, ಮುಂಬೈನ ಮಿಸ್ಟಿಕಾ ಪ್ರಿಯಾಂಕ ಮತ್ತಿತರರ ಪ್ರೇರಣೆಯೊಂದಿಗೆ ಉಪ್ಪಿನಕಾಯಿ, ವೈನ್ ತಯಾರಿಯಲ್ಲಿ ತೊಡಗಿದ್ದ ಫ್ಯಾನ್ಸಿ ಗಣಪತಿ, ನಂತರದಲ್ಲಿ ಚಾಕ್ಲೆಟ್ ತಯಾರಿ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದರು.

ಕೊಡವರ ಮದುವೆ ಮತ್ತಿತರ ಸಮಾರಂಭಗಳಿಗೆ ಚಾಕ್ಲೆಟ್‌ಗಳಿಗೆ ಆರ್ಡರ್ ತೆಗೆದುಕೊಂಡು ಪೂರೈಸತೊಡಗಿದರು. ಸಾಮಾನ್ಯವಾಗಿ ಕೊಡವರ ಮದುವೆ ಸಮಾರಂಭದಲ್ಲಿ  ಕನಿಷ್ಟ ನಾಲ್ಕೈದು ಬಾರಿ ಚಾಕ್ಲೆಟ್ ಬಳಕೆ ಇದೆ.

ಅಂತೆಯೇ ಸಮಾರಂಭಗಳಗೆ ಚಾಕ್ಲೆಟ್ ಪೂರೈಕೆ. ರಾಸಾಯನಿಕ ರಹಿತವಾದ ಉತ್ತಮ ಗುಣಮಟ್ಟದ  ಚಾಕ್ಲೆಟ್ ತಯಾರಿಸತೊಡಗಿದ್ದರಿಂದ ಈಗ ಬೇಡಿಕೆ ಹೆಚ್ಚಿದೆ. ತಯಾರಿಸಿದ್ದೆಲ್ಲ ಸ್ಥಳೀಯವಾಗಿಯೇ ಮಾರಾಟವಾಗುತ್ತಿವೆ.

ಮನೆ ಸಮೀಪದ ಹನಿವ್ಯಾಲಿ ರೆಸಾರ್ಟ್‌ನವರು ಪ್ರತಿವಾರ ರೂ 5000 ಮೌಲ್ಯದ ಚಾಕ್ಲೆಟ್ ಖರೀದಿಸುತ್ತಾರೆ. ಜೊತೆಗೆ ಆರ್ಡರ್ ಪಡೆದು ಬೆಂಗಳೂರು, ಚೆನ್ನೈಗೂ ರವಾನಿಸುತ್ತಿದ್ದಾರೆ. 

`ದಿನಕ್ಕೆ 8 ಕೆ.ಜಿ. ಚಾಕ್ಲೆಟ್ ತಯಾರಿಸುತ್ತಿದ್ದೇವೆ. ಚಾಕ್ಲೆಟ್ ತಯಾರಿಯ ಪೂರ್ಣ ಜವಾಬ್ದಾರಿ ನಮ್ಮದೇ. ಪೇಪರ್ ಕಟ್ಟಿಂಗ್, ಲೇಬಲಿಂಗ್‌ಗೆ ಸಹಾಯಕರಿದ್ದಾರೆ. ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ(ಸಿಎಫ್‌ಟಿಆರ್‌ಐ)ಯಿಂದ ಮಾನ್ಯತೆ ಪಡೆದು ಗುಣಮಟ್ಟದ ಚಾಕ್ಲೆಟ್ ಪೂರೈಸುವ ಉದ್ದೇಶವಿದೆ~ ಎನ್ನುತ್ತಾರೆ ಫ್ಯಾನ್ಸಿ ಗಣಪತಿ ದಂಪತಿ.

ಫ್ಯಾನ್ಸಿ ಗಣಪತಿ, ಯವಕಪಾಡಿಯಲ್ಲಿ ನಾಲ್ಕು ನಾಡು ಫ್ಲವರ್ಸ್‌ ಅಂಡ್ ಫಾಲಿಜಸ್ ಅಸೋಸಿಯೇಶನ್ ಹಾಗೂ ಪ್ರಕೃತಿ ಫಾರ್ಮರ್ಸ್‌ ಅಸೋಸಿಯೇಷನ್ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಗೃಹ ಬಳಕೆ ಉತ್ಪನ್ನ ತಯಾರಿಸುವ ಮಹಿಳೆಯರಿಗೆ ಉತ್ತೇಜನ ನೀಡುತ್ತಿದ್ದಾರೆ. ಶೀಘ್ರವೇ ಕೊಡಗಿನ ಪಾರಾಣೆಯಲ್ಲಿ ಕರ್ನಾಟಕ ಆರ್ಗ್ಯಾನಿಕ್ ಪ್ರೊಡ್ಯೂಸರ್ಸ್‌ ಕೋ ಆಪರೇಟಿವ್ ಲಿ. ಆರಂಭಿಸಿ ಕಾಫಿ ಎಸ್ಟೇಟ್‌ಗಳಿಂದ ಚಾಕ್ಲೆಟ್, ಉಪ್ಪಿನಕಾಯಿ, ವೈನ್ ಉತ್ಪಾದಿಸಿ ನಾಡಿನಾದ್ಯಂತ ರವಾನಿಸಲು ಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.