ನವದೆಹಲಿ (ಪಿಟಿಐ): 2011-12ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದಿಂದ ಒಟ್ಟು 3,48,029 ಟನ್‌ಗಳಷ್ಟು ಕಾಫಿ ರಫ್ತಾಗಿದೆ. ಜಾಗತಿಕ ಮಾರುಕಟ್ಟೆಗಳಿಂದ ಹೆಚ್ಚಿದ ಬೇಡಿಕೆ ಮತ್ತು ದೇಶೀಯ ಉತ್ಪಾದನೆ ಏರಿಕೆ ಕಂಡಿರುವುದರಿಂದ ಕಾಫಿ ರಫ್ತು ವಹಿವಾಟಿನಲ್ಲಿ ಹೊಸ ದಾಖಲೆ ನಿರ್ಮಿಸಲು ಸಾಧ್ಯವಾಗಿದೆ ಎಂದು ಕಾಫಿ ಮಂಡಳಿ ಹೇಳಿದೆ.
2010-11ನೇ ಸಾಲಿನಲ್ಲಿ ದೇಶದಿಂದ 3,16,034 ಟನ್‌ಗಳಷ್ಟು ಕಾಫಿ ರಫ್ತಾಗಿತ್ತು. ಪ್ರಸಕ್ತ ಅವಧಿಯಲ್ಲಿ ಪ್ರತಿ ಟನ್ ಕಾಫಿಗೆ ಸರಾಸರಿ ರೂ1,40,456 ಬೆಲೆ ಲಭಿಸಿದೆ. ಕಾಫಿ ಮಂಡಳಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಪ್ರಸಕ್ತ ಅವಧಿಯಲ್ಲಿ ಒಟ್ಟು ರಫ್ತು ವಹಿವಾಟು ಶೇ 33ರಷ್ಟು ಪ್ರಗತಿ ಕಂಡಿದ್ದು, ರೂ4,888 ಕೋಟಿಗಳಿಗೆ ಏರಿಕೆಯಾಗಿದೆ.
ಕಳೆದ ವರ್ಷ ಪ್ರತಿ ಟನ್‌ಗೆ ರೂ1,80,400 ದರ ಇದ್ದ ಅರೇಬಿಕಾ ತಳಿ ಸದ್ಯ ರೂ3,21,200ಕ್ಕೆ ಏರಿಕೆ ಕಂಡಿದೆ. ರೋಬಸ್ಟಾ ತಳಿಯ ಬೆಲೆಯೂ ಹೆಚ್ಚಳವಾಗಿದ್ದು, ಪ್ರತಿ ಟನ್‌ಗೆ ರೂ1,29,100 ರಷ್ಟಾಗಿದೆ.
ಕಾಫಿ ಉತ್ಪಾದನೆಯಲ್ಲಿ ಭಾರತ ಏಷ್ಯಾದಲ್ಲಿ ಮೂರನೆಯ ಸ್ಥಾನದಲ್ಲಿದೆ. ದೇಶದಿಂದ ಶೇ 60ರಷ್ಟು ಕಾಫಿ ಯೂರೋಪ್ ಮಾರುಕಟ್ಟೆಗಳಿಗೆ ರಫ್ತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.