ADVERTISEMENT

ಕಾರು ಮಾರಾಟ 10 ವರ್ಷಗಳಲ್ಲೇ ಕನಿಷ್ಠ!

ಜನವರಿಯಲ್ಲಿ ರಸ್ತೆಗಿಳಿದ 1,73,420 ಕಾರು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2013, 19:59 IST
Last Updated 15 ಫೆಬ್ರುವರಿ 2013, 19:59 IST
ಕಾರು ಮಾರಾಟ 10 ವರ್ಷಗಳಲ್ಲೇ ಕನಿಷ್ಠ!
ಕಾರು ಮಾರಾಟ 10 ವರ್ಷಗಳಲ್ಲೇ ಕನಿಷ್ಠ!   

ನವದೆಹಲಿ (ಪಿಟಿಐ):  ಜಾಗತಿಕ ಆರ್ಥಿಕ ಅಸ್ಥಿರತೆ, ಬಡ್ಡಿದರ ಏರಿಕೆ, ಹಣದುಬ್ಬರ ಮೊದಲಾದ ಪ್ರತಿಕೂಲ ಸಂಗತಿಗಳು ಗ್ರಾಹಕರಲ್ಲಿನ ವಿಶ್ವಾಸವನ್ನು ತಗ್ಗಿಸಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶೀಯ ಕಾರು ಮಾರಾಟ ದಶಕದ ಹಿಂದಿನ ಮಟ್ಟಕ್ಕೆ ಕುಸಿಯಲಿದೆ ಎಂದು ಭಾರತೀಯ ವಾಹನ ತಯಾರಿಕಾ ಸಂಸ್ಥೆಗಳ ಒಕ್ಕೂಟ (ಎಸ್‌ಎಐಎಂ) ಕಳವಳ ವ್ಯಕ್ತಪಡಿಸಿದೆ.

ಹೊಸ ಕಾರುಗಳಿಗೆ ಬೇಡಿಕೆ ತಗ್ಗಿದೆ. ಮುಖ್ಯವಾಗಿ, ಕಾರು ಖರೀದಿಸುವ ಹೊಸ ತಲೆಮಾರಿನವರ ಸಂಖ್ಯೆಯೂ ಇಳಿಮುಖವಾಗಿದೆ. ಆದ್ದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಕಾರು ಮಾರುಕಟ್ಟೆಯಲ್ಲಿ ಹೆಚ್ಚೆಂದರೆ ಶೇ 1ರಷ್ಟು ಪ್ರಗತಿ ಅಂದಾಜು ಮಾಡಬಹುದಾಗಿದೆ. ವಾಹನ ಉದ್ಯಮದ ಪ್ರಗತಿಗಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅಬಕಾರಿ ತೆರಿಗೆ ಕಡಿತ ಮಾಡಬೇಕು ಮತ್ತು `ಜವಾಹರಲಾಲ್ ನೆಹರು ನಗರ ನವೀಕರಣ ಅಭಿಯಾನ'(ಜೆ-ನರ್ಮ್)ದಡಿ ವಾಣಿಜ್ಯ ಬಳಕೆವಾಹನಗಳಿಗೆ ವಿಶೇಷ ಯೋಜನೆ ಪ್ರಕಟಿಸಬೇಕು ಎಂದು `ಎಸ್‌ಎಐಎಂ' ಒತ್ತಾಯಿಸಿದೆ.

ನವೆಂಬರ್, ಡಿಸೆಂಬರ್, ಜನವರಿ ಮೂರೂ ತಿಂಗಳಿಂದ ಕಾರು ಮಾರಾಟ ಸತತವಾಗಿ ಕುಸಿಯುತ್ತಿದೆ. 2012ರ ಜನವರಿಯಲ್ಲಿ 1,98,079 ಕಾರು ಮಾರಾಟವಾಗಿದ್ದರೆ, ಈ ಜನವರಿಯಲ್ಲಿ 1,73,420ಕ್ಕೆ ಕುಸಿದಿದೆ.

2002-03ನೇ ಸಾಲಿನಲ್ಲಿಯೂ ಕಾರು ಮಾರಾಟ ದಶಕದ ಹಿಂದಿನ ಮಟ್ಟವಾದ ಶೇ 2.09ಕ್ಕೆ ಕುಸಿದಿತ್ತು. ನಂತರ ಜಾಗತಿಕ ಆರ್ಥಿಕ ಹಿಂಜರಿತ ಸಂದರ್ಭದಲ್ಲಿ(2008-09)  ಕಾರುಗಳ ಮಾರಾಟದಲ್ಲಿ ಗಣನೀಯ ಕುಸಿತವಾಗಿತ್ತು. ಆಗ ಶೇ 1.39ರಷ್ಟು ಅಲ್ಪ ಪ್ರಗತಿ ದಾಖಲಾಗಿತ್ತು. 

ಈ ವರ್ಷವಂತೂ ಬಹಳಷ್ಟು ಹೊಸ ಮಾದರಿಯ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಆದರೆ `ಆರ್‌ಬಿಐ' ಬಡ್ಡಿ ದರ ಇಳಿಸದೇ ಇರುವುದರಿಂದ ಗ್ರಾಹಕರ ಮನಗೆಲ್ಲುವಲ್ಲಿ ವಾಹನಗಳು ವಿಫಲವಾಗಿವೆ ಎನ್ನುವುದು `ಎಸ್‌ಎಐಎಂ' ಅಧ್ಯಕ್ಷ ವಿಷ್ಣು ಮಾಥೂರ್ ಅವರ ವಿವರಣೆ.

ಈ ಬಾರಿಯ ಬಜೆಟ್‌ನಲ್ಲಾದರೂ ಸಣ್ಣ ಮತ್ತು ದೊಡ್ಡ ಕಾರಿನ ಅಬಕಾರಿ ತೆರಿಗೆಯನ್ನು ಕ್ರಮವಾಗಿ ಶೇ 10 ಮತ್ತು ಶೇ 22ಕ್ಕೆ ತಗ್ಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.