ಬೆಂಗಳೂರು: `ಕೇಂದ್ರ ಸರ್ಕಾರ ಕಲ್ಲಿದ್ದಲು ನೀತಿಯನ್ನು ಬದಲಿಸಲಿರುವ ಲಕ್ಷಣಗಳು ಕಾಣುತ್ತಿದ್ದು ಇದರಿಂದ ರಾಜ್ಯದ ವಿದ್ಯುತ್ ಉತ್ಪಾದನೆಗೆ ತೀವ್ರ ತೊಂದರೆಯಾಗಲಿದೆ. ಈ ಬಗ್ಗೆ ಶೀಘ್ರದಲ್ಲೇ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು~ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ನಗರದಲ್ಲಿ ಇತ್ತೀಚೆಗೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಆಯೋಜಿಸಿದ್ದ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಈ ಹಿಂದೆ ರಾಜ್ಯಕ್ಕೆ ಅಗತ್ಯವಿರುವಷ್ಟು ಕಲ್ಲಿದ್ದಲು ಪೂರೈಕೆಯ ಆಶ್ವಾಸನೆ ನೀಡಿದ್ದ ಕೇಂದ್ರ ಕಲ್ಲಿದ್ದಲು ಸಚಿವಾಲಯವು, ಈಗ ತನ್ನ ಕಲ್ಲಿದ್ದಲು ನೀತಿಯನ್ನೇ ಬದಲಿಸಿ ಖಾಸಗಿ ಕಂಪೆನಿಗಳಿಗೆ ಆದ್ಯತೆ ನೀಡಲು ಹೊರಟಿರುವ ಕ್ರಮ ಸರಿಯಲ್ಲ.
ಇದರಿಂದ ರಾಜ್ಯ ಸರ್ಕಾರಗಳು ಖಾಸಗಿ ಕಂಪೆನಿಗಳ ಜೊತೆಗೆ ಬಿಡ್‌ನಲ್ಲಿ ಪಾಲ್ಗೊಳ್ಳಬೇಕಾದ್ದು ಅನಿವಾರ್ಯವಾಗಲಿದೆ. ಹೀಗಾಗಿ ಹೊಸ ಕಲ್ಲಿದ್ದಲು ನೀತಿಯನ್ನು ಕೈ ಬಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದು~ ಎಂದರು.
`ರಾಜ್ಯದ ಯಡ್ಲಾಪುರ ಹಾಗೂ ಬಳ್ಳಾರಿ ಮೂರನೇ ಘಟಕಕ್ಕೆ ಹೊಸ ಯಂತ್ರಗಳ ಖರೀದಿ ಈಗಾಗಲೇ ನಡೆದಿದ್ದು, ಅಗತ್ಯವಿರುವಷ್ಟು ಕಲ್ಲಿದ್ದಲು ಪೂರೈಕೆಯಾಗದೇ ಹೋದರೆ ರಾಜ್ಯದ ವಿದ್ಯುತ್ ಕೊರತೆ ಹೆಚ್ಚಾಗಲಿದೆ~ ಎಂದು ಅವರು ಹೇಳಿದರು.
`ಉದ್ಯಮಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು. ಹೆಚ್ಚು ಹೆಚ್ಚು ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಮುಂದೆ ಬರಬೇಕು~ ಎಂದು ಅವರು ಕರೆ ನೀಡಿದರು.
ಸಮಾರಂಭದಲ್ಲಿ ಲಲಿತಾ ರಾವ್ ಸಾಹಿಬ್ ಹಾಗೂ ರೇಖಾ ಜಿ. ಕಾಮತ್ ಅವರಿಗೆ 2012 ನೇ ಸಾಲಿನ `ಕಾಸಿಯಾ ಅತ್ಯುತ್ತಮ ಮಹಿಳಾ ಉದ್ಯಮಿ~ ಪ್ರಶಸ್ತಿಯನ್ನು ನೀಡಲಾಯಿತು. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪ್ರಕಾಶ್ ಎನ್. ರಾಯ್ಕರ್, ಮಹಿಳಾ ಉದ್ಯಮಿಗಳ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಲಲನ್ ಸನಾಡೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.