ADVERTISEMENT

ಕಿಂಗ್‌ಫಿಷರ್ ಹೊಸ ವೇಳಾಪಟ್ಟಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಹಣಕಾಸು ಬಿಕ್ಕಟ್ಟಿನ ಕಾರಣ ನೀಡಿ ಆರು ದಿನಗಳಿಂದ ಹಲವಾರು ವಿಮಾನಗಳನ್ನು ರದ್ದುಗೊಳಿಸಿರುವ ಕಿಂಗ್‌ಫಿಷರ್ ಬುಧವಾರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ಮಾರ್ಚ್‌ವರೆಗೆ ಅನ್ವಯವಾಗಲಿರುವ ಹೊಸ ಪ್ರಯಾಣ ವೇಳಾಪಟ್ಟಿ ಸಲ್ಲಿಸಿದ್ದು, ಪ್ರತಿದಿನ 28 ವಿಮಾನಗಳು 170 ಹಾರಾಟಗಳನ್ನು ನಡೆಸಲಿವೆ ಎಂದು ತಿಳಿಸಿದೆ.

24 ತಾಸಿನೊಳಗೆ ಹೊಸ ವೇಳಾಪಟ್ಟಿ ನೀಡಬೇಕೆಂಬ ಮಂಗಳವಾರದ ಡಿಜಿಸಿಎ ಆದೇಶಕ್ಕೆ ಅನುಗುಣವಾಗಿ ಕಂಪೆನಿ ಸಲ್ಲಿಸಿರುವ ವೇಳಾಪಟ್ಟಿಯನ್ನು ಪರಿಶೀಲಿಸುತ್ತಿರುವುದಾಗಿ ಡಿಜಿಸಿಎ ತಿಳಿಸಿದೆ. ಈ ಮುನ್ನ ಕಂಪೆನಿಯ 64 ವಿಮಾನಗಳು ಪ್ರತಿದಿನ 400 ಹಾರಾಟಗಳನ್ನು ನಡೆಸುತ್ತಿದ್ದವು.

ಈ ಮಧ್ಯೆ ಬುಧವಾರ ಕೂಡ ಸಂಸ್ಥೆಯ 30 ವಿಮಾನಗಳ ಹಾರಾಟ ರದ್ದಾಗಿದ್ದರಿಂದ ಪ್ರಯಾಣಿಕರು ಪರದಾಡಿದರು.
ಮತ್ತೊಂದೆಡೆ ಎಸ್‌ಬಿಐ ನೇತೃತ್ವದ 13 ಬ್ಯಾಂಕುಗಳ ಸಾಲ ನೀಡಿಕೆ ಸಂಸ್ಥೆಗಳ ಒಕ್ಕೂಟವು ಕಿಂಗ್‌ಫಿಷರ್‌ಗೆ ಮತ್ತಷ್ಟು ಅಲ್ಪಾವಧಿ ಸಾಲ ನೀಡುವ ಬಗ್ಗೆ ಪರಿಶೀಲಿಸುತ್ತಿದೆ; ಆದರೆ ಎಷ್ಟು ಸಾಲ ನೀಡಬೇಕೆಂಬ ಬಗ್ಗೆ ಇನ್ನೂ ನಿರ್ಧರಿಸಬೇಕಿದೆ ಎನ್ನಲಾಗಿದೆ. ಆದರೆ ಬ್ಯಾಂಕ್ ಆಗಲೀ, ಕಿಂಗ್‌ಫಿಷರ್ ಆಗಲೀ ಇದನ್ನು ಖಚಿತಪಡಿಸಿಲ್ಲ. ಇದೇ ವೇಳೆ, ಶುಕ್ರವಾರ ರಾತ್ರಿಯಿಂದ ಕೋಲ್ಕತ್ತಾದಲ್ಲಿನ ನಿರ್ವಹಣೆಯನ್ನು ಸಂಪೂರ್ಣ ನಿಲ್ಲಿಸಿದ್ದ ಕಿಂಗ್‌ಫಿಷರ್ ಈಶಾನ್ಯ ರಾಜ್ಯಗಳಿಗೆ ಬುಧವಾರ ಸಂಚಾರ ಆರಂಭಿಸಿದೆ.

ADVERTISEMENT

ಬ್ಯಾಂಕುಗಳು ಹಣ ನೀಡಲು ಮುಂದಾದರೆ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಬ್ಯಾಂಕುಗಳು ತಮ್ಮ ಅನುತ್ಪಾದಕ ಆಸ್ತಿ ಪ್ರಮಾಣದ ಬಗ್ಗೆ ಯೋಚಿಸಿ ಸಾಲ ನೀಡುವ ಬಗ್ಗೆ ನಿರ್ಧರಿಸಲಿ~ ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಹೇಳಿದ್ದಾರೆ.

`ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಗೆ ನೆರವು ನೀಡಿದಂತೆ ಖಾಸಗಿ ಸಂಸ್ಥೆಗೆ ನೆರವು ನೀಡಲಾಗದು ಎಂದಿದ್ದಾರೆ.
ಎಸ್‌ಬಿಐ ಮುಂದಾದರೆ ರಿಸರ್ವ್ ಬ್ಯಾಂಕ್ ಅದಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಡೆಪ್ಯುಟಿ ಗವರ್ನರ್ ಕೆ.ಸಿ.ಚಕ್ರವರ್ತಿ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ನೇಣಿಗೆ ಶರಣಾಗುತ್ತಿರುವ ರೈತರನ್ನು ಕಾಪಾಡಲಾಗದ ರಾಷ್ಟ್ರೀಕೃತ ಬ್ಯಾಂಕುಗಳು ಲಾಭವನ್ನೇ ಕಾಣದ ಕಿಂಗ್‌ಫಿಷರ್ ನೆರವಿಗೆ ಮುಂದಾಗಿರುವುದು ತಮಾಷೆಯ ಸಂಗತಿ ಎಂದು ಮಾಜಿ ಬಂಡವಾಳ ಹೂಡಿಕೆ ಬ್ಯಾಂಕರ್‌ಕೂಡ ಆದ ಲೇಖಕ ಚೇತನ್ ಭಗತ್ ಛೇಡಿಸಿದ್ದಾರೆ.

ಕಿಂಗ್‌ಫಿಷರ್ ಮುಖ್ಯಸ್ಥ ವಿಜಯ್ ಮಲ್ಯ ಸ್ಪಷ್ಟನೆ ನೀಡಿ, `ನಾವು ಸಂಕಷ್ಟ ಪರಿಹಾರ ಪ್ಯಾಕೇಜನ್ನು ಕೇಳಿಯೇ ಇಲ್ಲ. ಇದು ಮಾಧ್ಯಮಗಳ ಸೃಷ್ಟಿ~ ಎಂದಿದ್ದಾರೆ.

ಅಬಕಾರಿ ಮತ್ತು ಸುಂಕ ಕೇಂದ್ರ ಮಂಡಲಿ ಅಧ್ಯಕ್ಷ ಎಸ್.ಕೆ.ಗೋಯಲ್ ಮಾತನಾಡಿ, ಕಿಂಗ್‌ಫಿಷರ್ 70 ಕೋಟಿ ರೂಪಾಯಿ ಬಾಕಿ ಪಾವತಿಸಬೇಕಿದ್ದು ಮಾರ್ಚ್ 31ರ ವೇಳೆಗೆ ಪಾವತಿಸುತ್ತದೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಾರ್ಪೊರೇಟ್ ವ್ಯವಹಾರಗಳ ಸಚಿವ ವೀರಪ್ಪ ಮೊಯಿಲಿ, ಸಂಸ್ಥೆಯ ದುಃಸ್ಥಿತಿಗೆ ದುರಾಡಳಿತ ಹಾಗೂ ವೃತ್ತಿಪರ ನಿರ್ವಹಣೆಯ ಕೊರತೆಯೇ ಕಾರಣ ಎಂದಿದ್ದಾರೆ.

ಕಿಂಗ್‌ಫಿಷರ್‌ಗೆ ಸಾಲ- ಚೇತನ್ ಭಗತ್ ಲೇವಡಿ

ಆಸ್ಪ್ರೇಲಿಯಾದ ಪರ್ತ್‌ಗೆ ಕಿಂಗ್‌ಫಿಷರ್ ಟಿಕೆಟ್ ಕಾಯ್ದಿರಿಸಿ ಸಂಕಷ್ಟಕ್ಕೆ ಸಿಲುಕಿದ ಮಾಜಿ ಬಂಡವಾಳ ಹೂಡಿಕೆ ಬ್ಯಾಂಕರ್ ಕೂಡ ಆದ ಲೇಖಕ ಚೇತನ್ ಭಗತ್, ಬೇರೆ ಕಂಪೆನಿಗಳು ಕಿಂಗ್‌ಫಿಷರ್‌ನ್ನು ಖರೀದಿಸಬೇಕೆಂದು ಸಲಹೆ ನೀಡಿದ್ದಾರೆ.

ಬೇರೆ ಸಂಸ್ಥೆಗಳು ಕಿಂಗ್‌ಫಿಷರ್ ನಡೆಸಿ ಅದರಿಂದ ಬರುವ ಆದಾಯವನ್ನು ಸಾಲ ನೀಡಿಕೆ ಸಂಸ್ಥೆಗಳೊಡನೆ ಹಂಚಿಕೊಳ್ಳಲಿ. ಆಗ ಪ್ರಯಾಣಿಕರಿಗೂ ತೊಂದರೆ ತಪ್ಪುತ್ತದೆ. ಸಾಲ ನೀಡಿರುವ ಸಂಸ್ಥೆಗಳಿಗೂ ಅನುಕೂಲವಾಗುತ್ತದೆ ಎಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹೇಳಿದ್ದಾರೆ.

`ಕಿಂಗ್‌ಫಿಷರ್ ಲಾಭ ಮಾಡಲು ಸಾಧ್ಯವೇ ಇಲ್ಲ ಹಾಗೂ ಸಾಲ ನೀಡಿದವರು ಆ ಸಂಸ್ಥೆಯಿಂದ ತಮ್ಮ ಹಣ ವಾಪಸು ಪಡೆಯುವ ಸಾಧ್ಯತೆಯೇ ಇಲ್ಲ~ ಎಂದೂ ಭವಿಷ್ಯ ನುಡಿದಿದ್ದಾರೆ.

ನೇಣಿಗೆ ಶರಣಾಗುತ್ತಿರುವ ರೈತರನ್ನು ಕಾಪಾಡಲಾಗದ ರಾಷ್ಟ್ರೀಕೃತ ಬ್ಯಾಂಕುಗಳು ಲಾಭವನ್ನೇ ಕಾಣದ ಕಿಂಗ್‌ಫಿಷರ್‌ಗೆ ನೆರವು ನೀಡಲು ಮುಂದಾಗಿರುವುದು ತಮಾಷೆಯ ಸಂಗತಿ ಎಂದೂ ಚೇತನ್ ಛೇಡಿಸಿದ್ದಾರೆ.
`ನಾನು ಸಿಂಗಪುರ ಮೂಲಕ ಪರ್ತ್‌ಗೆ ತೆರಳಲು ಕಿಂಗ್‌ಫಿಷರ್ ಟಿಕೆಟ್ ಕಾಯ್ದಿರಿಸಿದ್ದೆ. ನನ್ನ ಹಣ ವಾಪಸು ಬೇಕು. ಸಹಾಯವಾಣಿಗೆ ಫೋನ್ ಮಾಡಿದರೆ ಎತ್ತುವವರೇ ಇಲ್ಲ. ದಯವಿಟ್ಟು ನನ್ನನ್ನು ಸಂಪರ್ಕಿಸಿ~ ಎಂದು ಅವರು ಭಾನುವಾರ ಬರೆದಿದ್ದರು.

ಒಂದೊಮ್ಮೆ ಕಿಂಗ್‌ಷಿಷರ್‌ನ ನಿಷ್ಠ ಗ್ರಾಹಕರೂ ಆಗಿದ್ದ ಚೇತನ್, `ಕಿಂಗ್‌ಫಿಷರ್ ತನ್ನ ಸಮಸ್ಯೆಗಳಿಂದ ಪಾರಾಗಲು ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಬಳಸುವುದು ಸರಿಯಲ್ಲ~ ಎಂದು ಟ್ವಿಟರ್‌ನಲ್ಲಿ ಕಳೆದ ವರ್ಷ ಅಭಿಪ್ರಾಯಪಟ್ಟಿದ್ದರು.

ಇಂಧನ ಆಮದಿಗೆ ಅನುಮತಿ

ವಿಮಾನಯಾನ ಉದ್ದಿಮೆಗೆ ಸಂಬಂಧಿಸಿದಂತೆ ಸರ್ಕಾರ ಬುಧವಾರ ಮಹತ್ವದ ನಿರ್ಧಾರ ಕೈಗೊಂಡು, ಸ್ಥಳೀಯ ವಿಮಾನಯಾನ ಸಂಸ್ಥೆಗಳಿಗೆ ನೇರವಾಗಿ ಇಂಧನ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ.

ಸಂಕಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳ ಹೊರೆ ತಗ್ಗಿಸುವ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ಸರ್ಕಾರ ತಿಳಿಸಿದೆ.

ಮುಕ್ತ ಜನರಲ್ ಲೈಸನ್ಸ್ ಪದ್ಧತಿಯಡಿ ಇಂಧನ ಆಮದು ಮಾಡಿಕೊಂಡರೆ ರಾಜ್ಯ ಸರ್ಕಾರಗಳು ಪ್ರಸ್ತುತ ವಿಧಿಸುತ್ತಿರುವ ಶೇ 12ರಿಂದ ಶೇ 23ರವರೆಗೆ ವಿಧಿಸುತ್ತಿರುವ ವ್ಯಾಪಾರ ತೆರಿಗೆಯನ್ನು ಕಂಪೆನಿಗಳು ಉಳಿಸಬಹುದಾಗಿದೆ. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳು ಡಿಜಿಸಿಎಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಇದರಿಂದ ಕಂಪೆನಿಗಳಿಗೆ ಶೇ 20ರಷ್ಟು ಉಳಿತಾಯದ ಸಾಧ್ಯತೆ ಇದ್ದರೂ, ಆರಂಭದಲ್ಲಿ ಆಮದು ಮಾಡಿಕೊಂಡ ಇಂಧನದ ದಾಸ್ತಾನು ವ್ಯವಸ್ಥೆ ಹಾಗೂ ಸಾಗಣೆ ಮೂಲಸೌಕರ್ಯಕ್ಕಾಗಿ ಬಂಡವಾಳ ಹೂಡಬೇಕಾಗುತ್ತದೆ. ಇಂಧನ ವೆಚ್ಚವೇ ತನ್ನ ನಿರ್ವಹಣಾ ವೆಚ್ಚದ ಶೇ 50ರಷ್ಟಾಗುತ್ತದೆ ಎಂದಿದ್ದ ಕಿಂಗ್‌ಫಿಷರ್ ಮತ್ತಿತರ ಸಂಸ್ಥೆಗಳು ಇಂಧನ ಆಮದು ಅನುಮತಿಗೆ ಒತ್ತಾಯಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.