ಬೆಂಗಳೂರು: ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಅಕ್ಟೋಬರ್ ಕೊನೆ ಅಥವಾ ನವೆಂಬರ್ 2ನೇ ವಾರದಲ್ಲಿ ಆಯೋಜಿಸುವ ಸಾಧ್ಯತೆ ಇದ್ದು, ಇದಕ್ಕೆ ವಿಶ್ವದ ವಿವಿಧ ರಾಷ್ಟ್ರಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಕೃಷಿ ಸಚಿವ ಉಮೇಶ ಕತ್ತಿ ಇಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿದ ನಂತರ ಸಮಾವೇಶದ ದಿನಾಂಕ ನಿಗದಿ ಮಾಡಲಾಗುವುದು. ಇನ್ನೊಂದು ವಾರದಲ್ಲಿ ಈ ತೀರ್ಮಾನ ಆಗಲಿದ್ದು, ಕೃಷಿ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆಗೆ ಅವಕಾಶ ಇಲ್ಲ. ಬದಲಿಗೆ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಅವುಗಳನ್ನು ಮೌಲ್ಯವರ್ಧಿತ ಮಾಡುವ ಕ್ಷೇತ್ರದಲ್ಲಿ ಹೂಡಿಕೆಗೆ ನಿರೀಕ್ಷೆ ಮಾಡಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಕೃಷಿ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಕೊರತೆ ಇದ್ದು, ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಕೃಷಿ ಕ್ಷೇತ್ರವನ್ನು ಹೆಚ್ಚು ಯಾಂತ್ರೀಕರಣಗೊಳಿಸುವ ಉದ್ದೇಶವೂ ಈ ಸಮಾವೇಶದ ಹಿಂದೆ ಇದ್ದು, ಆ ಕ್ಷೇತ್ರದಲ್ಲಿನ ಉದ್ಯಮಗಳು ಸಮಾವೇಶದಲ್ಲಿ ಭಾಗವಹಿಸಲಿವೆ’ ಎಂದು ಹೇಳಿದರು.
‘ಕೇವಲ ಕೃಷಿ ಅಲ್ಲದೆ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಹೈನುಗಾರಿಕೆ ಕ್ಷೇತ್ರದಲ್ಲೂ ಬಂಡವಾಳ ನಿರೀಕ್ಷೆ ಮಾಡಲಾಗಿದೆ. ನಿರೀಕ್ಷೆಯಂತೆ ನಡೆದರೆ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹರಿದುಬರಲಿದೆ. ಇದುವರೆಗೂ 50 ಸಾವಿರ ಕೋಟಿ ರೂಪಾಯಿ ಹೂಡಿಕೆಯ ಭರವಸೆ ಸಿಕ್ಕಿದೆ’ ಎಂದು ವಿವರಿಸಿದರು.
‘ಹೂಡಿಕೆದಾರರ ಸಮಾವೇಶದಿಂದ ರೈತರ ಭೂಮಿಗೇನೂ ಸಂಚಕಾರ ಇಲ್ಲ. ಕೇವಲ ಕೈಗಾರಿಕೆಗಳ ಸ್ಥಾಪನೆ ಸಲುವಾಗಿ ಸ್ವಲ್ಪ ಪ್ರಮಾಣದ ಭೂಮಿ ನೀಡುವುದು ಬಿಟ್ಟರೆ ಕೃಷಿಯಲ್ಲಿ ತೊಡಗಲು ಯಾವುದೇ ಕಂಪೆನಿಗೆ ಭೂಮಿ ನೀಡುವುದಿಲ್ಲ. ಅದಕ್ಕೆ ಸರ್ಕಾರದ ಬೆಂಬಲವೂ ಇಲ್ಲ’ ಎಂದು ಹೇಳಿದರು.
ಸುವರ್ಣ ಭೂಮಿ: ಎರಡು ಎಕರೆಗಿಂತ ಕಡಿಮೆ ಭೂಮಿ ಇರುವ ಬಿ.ಪಿ.ಎಲ್ ಕುಟುಂಬಗಳಿಗೆ 10 ಸಾವಿರ ರೂಪಾಯಿ ಧನಸಹಾಯ ಮಾಡುವ ಸುವರ್ಣ ಭೂಮಿ ಯೋಜನೆಗೆ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 5000 ಮಂದಿ ರೈತರಿಗೆ ಈ ಯೋಜನೆಯಡಿ ಹಣಕಾಸಿನ ನೆರವು ನೀಡಲಾಗುವುದು.
ಮೊದಲ ಕಂತಿನ 5000 ರೂಪಾಯಿಯನ್ನು ಮೇ ಅಂತ್ಯದೊಳಗೆ ರೈತರಿಗೆ ನೀಡಲಾಗುವುದು. 2ನೇ ಕಂತಿನ ಹಣವನ್ನು ಆಗಸ್ಟ್ ತಿಂಗಳಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು. ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದರು.
ಆಹಾರ ಉತ್ಪಾದನೆ: 2011-12ನೇ ಸಾಲಿನಲ್ಲಿ 140 ಲಕ್ಷ ಟನ್ ಆಹಾರ ಉತ್ಪಾದನಾ ಗುರಿ ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.