ADVERTISEMENT

ಕೇಶಕ್ಕೆ ಹೆಚ್ಚಿದ ಬೇಡಿಕೆ..!

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಕೋಲ್ಕತ್ತ (ಪಿಟಿಐ): ಭಾರತೀಯರ ನೀಳ ಕೇಶಕ್ಕೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಹೌದು! ಇಲ್ಲಿನವರ ಸುಂದರ, ದಪ್ಪ  ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಬಳಸದ ನೈಸರ್ಗಿಕ ಕೂದಲಿಗೆ ಸಾಗರೋತ್ತರ `ಕೃತಕ ಕೂದಲು~ (ವಿಗ್) ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಆನ್‌ಲೈನ್ ಕೂದಲು ಮಾರಾಟ ತಾಣವೊಂದು ತಿಳಿಸಿದೆ.

ಹೆಚ್ಚಿನ ಭಾರತೀಯರು ತಮ್ಮ ಕೇಶರಾಶಿಗೆ ರಾಸಾಯನಿಕ ಬಳಸುವುದಿಲ್ಲ. ಬದಲಿಗೆ ಶುದ್ಧ ತೆಂಗಿನ ಎಣ್ಣೆ ಸೇರಿದಂತೆ ನೈಸರ್ಗಿಕ ತೈಲಗಳನ್ನು ಲೇಪಿಸುತ್ತಾರೆ. ಇದರಿಂದ ಕೂದಲು ಹೆಚ್ಚಿನ ಹೊಳಪು ಪಡೆದುಕೊಂಡು ಸುಂದರವಾಗಿ ಕಾಣುತ್ತದೆ. ಉಳಿದ ದೇಶದವರಿಗೆ ಹೋಲಿಸಿದರೆ ಭಾರತೀಯರ ಕೂದಲು ಹೆಚ್ಚು ದಪ್ಪ ಮತ್ತು ಗಟ್ಟಿಯಾಗಿರುತ್ತದೆ ಎಂದು ಕೂದಲು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಚೀನಾ ಮೂಲದ ಇಂಟರ್‌ನೆಟ್ ತಾಣ `ಆಲಿಬಾಬಾಡಾಟ್‌ಕಾಂ~ ಹೇಳಿದೆ.

ಈ ಕಾರಣಗಳಿಂದ ಭಾರತೀಯರ ಕೂದಲು ಸಾಗರೋತ್ತರ `ವಿಗ್~ ಮಾರುಕಟ್ಟೆಯಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ಅಷ್ಟೇ, ಅಲ್ಲ, ಈ ಕೂದಲು `ಇ-ವಾಣಿಜ್ಯ~ ತಾಣಗಳ ಪ್ರಮುಖ ಆದಾಯ ಮೂಲವೂ ಹೌದು.

ಕೂದಲು ಮಾರಾಟ ಮಾಡಲು ಇಂತಹ ಹಲವು ತಾಣಗಳು ಹುಟ್ಟಿಕೊಂಡಿವೆ. ಆನ್‌ಲೈನ್ ಮೂಲಕ ಕೂದಲು ಮಾರಾಟ ನಡೆಯುವುದರಿಂದ ಇದೇ ಈ ತಾಣಗಳಿಗೆ ದೊಡ್ಡ ವಹಿವಾಟು ಮೂಲ ಎನ್ನುತ್ತಾರೆ `ಅಲಿಬಾಬಡಾಟ್‌ಕಾಂ~ನ ಭಾರತೀಯ ಮಾರುಕಟ್ಟೆ ವ್ಯವಸ್ಥಾಪಕ ಸಂದೀಪ್ ದೇಶಪಾಂಡೆ.

ಜಾಗತಿಕ ಆನ್‌ಲೈನ್ `ಬಿ2ಬಿ~ ವಹಿವಾಟು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಲಿಬಾಬ.ಕಾಂ, ಕೂದಲು ವ್ಯಾಪಾರದಲ್ಲೂ ಅಗ್ರಸ್ಥಾನದಲ್ಲಿದೆ. ಜಗತ್ತಿನಾದ್ಯಂತ ಶೇ 42ರಷ್ಟು ಜನ ಮನುಷ್ಯನ ಕೂದಲಿಗೆ ಸಂಬಂಧಿಸಿದ ಮಾಹಿತಿಯನ್ನು ಈ ತಾಣದಲ್ಲಿ ಹುಡುಕುತ್ತಾರೆ.

ಭಾರತೀಯರ ಕೂದಲನ್ನು ಸುಲಭವಾಗಿ ಒಣಗಿಸಬಹುದು. ಬಣ್ಣ ಮಾಸಿರುವುದಿಲ್ಲ. ಸಹಜವಾಗಿಯೇ ಕೃತಕ ಕೂದಲನ್ನು ಬಳಸುವರ ಪಾಲಿಗೆ ಇದು ಮೊದಲ ಆಯ್ಕೆ ಎನ್ನುತ್ತಾರೆ ಪಾಂಡೆ.

ಆನ್‌ಲೈನ್ ಮೂಲಕ ನಡೆಯುವ ಕೂದಲು ವಹಿವಾಟಿನ ವಾರ್ಷಿಕ ಮೊತ್ತ ದಶಲಕ್ಷ ಡಾಲರ್‌ಗಳನ್ನು ದಾಟುತ್ತದೆ ಎನ್ನುತ್ತಾರೆ  ಚೆನ್ನೈ ಮೂಲದ ಓಂ ಶಕ್ತಿ ಮುರುಗನ್ ಎಂಟರ್‌ಪ್ರೈಸಸ್ ಕಂಪೆನಿಯ ಪ್ರವರ್ತಕರಲ್ಲಿ ಒಬ್ಬರಾದ ವೆಂಕಟೇಶನ್.

 ಈ ಕಂಪೆನಿ, ಆಂಧ್ರಪ್ರದೇಶದಲ್ಲಿರುವ ಪ್ರಸಿದ್ಧ ತಿರುಪತಿ ತಿಮ್ಮಪ್ಪ ದೇವಸ್ಥಾನದಿಂದ ಭಕ್ತರ ಕೂದಲನ್ನು ಸಂಗ್ರಹಿಸುತ್ತದೆ. ಜತೆಗೆ, ದೇಶದ ಹಲವೆಡೆ ದೇವಸ್ಥಾನಗಳಿಂದ ಭಕ್ತರ ಕೂದಲನ್ನು ಸಂಗ್ರಹಿಸಿ ಅದನ್ನು ವರ್ಗೀಕರಿಸಿ, ತೊಳೆದು, ಬಿಸಿಲಲ್ಲಿ ಒಣಗಿಸಿ ವಿದೇಶಗಳಿಗೆ ರಫ್ತು ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.