ADVERTISEMENT

ಕ್ಯಾಂಪಸ್ ನೇಮಕಾತಿ ಸದ್ಯಕ್ಕಿಲ್ಲ

ವರಮಾನ ಕುಸಿತ: ವೆಚ್ಚ ಕಡಿತಕ್ಕೆ ಮುಂದಾದ ಇನ್ಫೊಸಿಸ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST
ಕ್ಯಾಂಪಸ್ ನೇಮಕಾತಿ ಸದ್ಯಕ್ಕಿಲ್ಲ
ಕ್ಯಾಂಪಸ್ ನೇಮಕಾತಿ ಸದ್ಯಕ್ಕಿಲ್ಲ   

ಬೆಂಗಳೂರು (ಐಎಎನ್‌ಎಸ್):  ಒಟ್ಟಾರೆ ವರಮಾನ ವೃದ್ಧಿಯಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಾಣುತ್ತಿಲ್ಲವಾದ್ದರಿಂದ ಐ.ಟಿ ಸೇವಾ ಸಂಸ್ಥೆ ಇನ್ಫೊಸಿಸ್ `ವೆಚ್ಚ ಕಡಿತ'ಕ್ಕೆ ಮುಂದಾಗಿದೆ.

ಈ ಯೋಜನೆಯ ಅಂಗವಾಗಿ 2013-14ನೇ ಹಣಕಾಸು ವರ್ಷದಲ್ಲಿ  ನೇಮಕ ಪ್ರಮಾಣ ಕಡಿಮೆ ಮಾಡಲು ಮತ್ತು ನೇಮಕ ಪ್ರಕ್ರಿಕೆಯೆಯಲ್ಲಿ `ಮಂದಗತಿ' ನೀತಿ  ಅನುಸರಿಸಲು ಕಂಪೆನಿ ನಿರ್ಧರಿಸಿದೆ. ಕಳಪೆ ಸಾಧನೆ ಪಟ್ಟಿಯಲ್ಲಿರುವ ಸಿಬ್ಬಂದಿಗಳನ್ನು ಮನೆಗೆ ಕಳುಹಿಸುವ ಮೂಲಕವೂ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಮಾಡುವ ಯೋಜನೆಯೂ ಇದೆ.

ಪ್ರತಿವರ್ಷ ಇನ್ಫೊಸಿಸ್ ಕ್ಯಾಂಪಸ್ ಆಯ್ಕೆ ಮೂಲಕ ಶೇ 70ರಷ್ಟು ಹೊಸಬರನ್ನು ನೇಮಿಸಿಕೊಳ್ಳುತ್ತಿದೆ. ಆದರೆ, ಈ ವರ್ಷ ಕ್ಯಾಂಪಸ್ ಆಯ್ಕೆ ನಿಧಾನವಾಗಲಿದೆ. ಮೂಲಸೌಕರ್ಯ, ಕ್ಲೌಡ್ ಮೊಬಿಲಿಟಿ, ಕನ್ಸಲ್ಟೆನ್ಸಿ ಸೇರಿದಂತೆ ಹೊಸ  ಕ್ಷೇತ್ರಗಳಿಗೆ ಈಗಿರುವ ಸಿಬ್ಬಂದಿಗಳಲ್ಲೇ ಶೇ 30ರಷ್ಟು ಜನರಿಗೆ ಬಡ್ತಿ ನೀಡಿ ನೇಮಕ ಮಾಡಲಾಗುವುದು ಎಂದು `ಸಿಇಒ' ಎಸ್.ಡಿ.ಶಿಬುಲಾಲ್ ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6ರಿಂದ 10ರಷ್ಟು ವಾರ್ಷಿಕ ವರಮಾನ ಪ್ರಗತಿ ಅಂದಾಜು ಮಾಡಲಾಗಿದೆ.    ಇದು ಐಟಿ ಉದ್ಯಮ ಕ್ಷೇತ್ರದ ಸಾಮಾನ್ಯ ನಿರೀಕ್ಷೆಗಿಂತಲೂ ಬಹಳ ಕಡಿಮೆ ಇದೆ. ವರಮಾನ ಮುನ್ನೋಟ ತಗ್ಗಿರುವುದೂ ಸಹ ಹೊಸ ನೇಮಕ ಪ್ರಕ್ರಿಯೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ವರ್ಷ ಒಟ್ಟಾರೆ 10 ಸಾವಿರ ಎಂಜಿನಿಯರ್‌ಗಳು ಕಂಪೆನಿ ಸೇರಲಿದ್ದಾರೆ.

ಆದರೆ, ಇವರಲ್ಲಿ 5,000 ಜನರಿಗೆ ಕಳೆದ ಹಣಕಾಸು ವರ್ಷದಲ್ಲೇ ಆಹ್ವಾನ ಪತ್ರ ಕಳುಹಿಸಲಾಗಿದೆ ಎಂದು ಶಿಬುಲಾಲ್ ವಿವರಿಸಿದ್ದಾರೆ.
2011-12ನೇ ಸಾಲಿನಲ್ಲಿ ಒಟ್ಟಾರೆ 45,605 ಮತ್ತು  2012-13ರಲ್ಲಿ  37,036 ಉದ್ಯೋಗಿಗಳನ್ನು ಹೊಸದಾಗಿ ನೇಮಿಸಿಕೊಳ್ಳಲಾಗಿದೆ. ಆದರೆ, 2013ರಲ್ಲಿ 30,342 ಮತ್ತು 2012ರಲ್ಲಿ  26,431 ಉದ್ಯೋಗಿಗಳು ಕಂಪೆನಿ ತೊರೆದಿದ್ದಾರೆ. ಇದರಿಂದ ಕೆಲಸ ತೊರೆಯುವವರ ಪ್ರಮಾಣ ಶೇ 14.7ರಿಂದ ಶೇ 16.3ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.