ADVERTISEMENT

ಗುಟ್ಕಾ ನಿಷೇಧ: ಅನುಷ್ಠಾನ ಸವಾಲು

ಆಹಾರ ನಿರೀಕ್ಷಕರ ಕೊರತೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 19:59 IST
Last Updated 8 ಜೂನ್ 2013, 19:59 IST

ಬೆಂಗಳೂರು: ಆಹಾರ ನಿರೀಕ್ಷಕರ ಕೊರತೆಯ ಕಾರಣ, ಗುಟ್ಕಾ ಉತ್ಪಾದನೆ ಮತ್ತು ಮಾರಾಟ ನಿಷೇಧ ಆದೇಶವನ್ನು ಅನುಷ್ಠಾನಕ್ಕೆ ತರುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಆರೋಗ್ಯ ಇಲಾಖೆ ನೀಡುವ ಅಂಕಿ-ಸಂಖ್ಯೆಗಳ ಪ್ರಕಾರ ರಾಜ್ಯದಲ್ಲಿ ಕನಿಷ್ಠ 210 ಆಹಾರ ನಿರೀಕ್ಷಕರ ಅಗತ್ಯ ಇದೆ. ಆದರೆ ಈಗಿರುವ ಆರೋಗ್ಯ ನಿರೀಕ್ಷಕರ ಸಂಖ್ಯೆ 85 ಮಾತ್ರ. ಇದರ ಪರಿಣಾಮವಾಗಿ ಗುಟ್ಕಾ ನಿಷೇಧವನ್ನು ಅನುಷ್ಠಾನಕ್ಕೆ ತರಲು ಸಿಬ್ಬಂದಿ ಕೊರತೆ ಎದುರಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಾಯ್ದೆಯ ಅಡಿ ಗುಟ್ಕಾ ನಿಷೇಧಿಸಲಾಗಿದೆ. ನಿಷೇಧ ಅನುಷ್ಠಾನಕ್ಕೆ ತರಲು ವಿಜ್ಞಾನ ಪದವಿ (ರಸಾಯನ ವಿಜ್ಞಾನ ಅಥವಾ ಜೀವ ವಿಜ್ಞಾನ) ಹೊಂದಿರುವ ಆಹಾರ ನಿರೀಕ್ಷಕರ ಅಗತ್ಯವಿದೆ. ಸಿಬ್ಬಂದಿ ಕೊರತೆ ತುಂಬಿಕೊಳ್ಳಲು, ಜಾಹೀರಾತು ನೀಡಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಯನ್ನು ಇಲಾಖೆ ಆರಂಭಿಸಿದೆ.

ತತ್ಕಾಲಕ್ಕೆ, ಗುಟ್ಕಾ ನಿಷೇಧ ಅನುಷ್ಠಾನಕ್ಕೆ ತರಲು ಆಹಾರ ಇಲಾಖೆಯು ಗೃಹ ಇಲಾಖೆಯ ಮೊರೆ ಹೋಗಿದೆ. `ಪೊಲೀಸ್ ಸಿಬ್ಬಂದಿ ಸಹಕಾರದಿಂದ ಗುಟ್ಕಾ ನಿಷೇಧವನ್ನು ರಾಜ್ಯದ ಎಲ್ಲೆಡೆ ಜಾರಿಗೆ ತರಬೇಕು ಎಂದು ರಾಜ್ಯ ಪೊಲೀಸ್ ಇಲಾಖೆಯನ್ನು ಕೋರಲಾಗಿದೆ' ಎಂದು ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮದನ್ ಗೋಪಾಲ್ ತಿಳಿಸಿದರು.

`ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದಾಗ, ಅದನ್ನು ಅನುಷ್ಠಾನಕ್ಕೆ ತರಲು ಪೊಲೀಸ್ ಸಿಬ್ಬಂದಿಯ ಸಹಕಾರ ಪಡೆಯಲಾಗಿತ್ತು. ಇದೇ ಮಾದರಿಯಲ್ಲಿ ಗುಟ್ಕಾ ನಿಷೇಧ ಅನುಷ್ಠಾನಕ್ಕೂ ಪೊಲೀಸರ ಸಹಕಾರ ಕೋರಲಾಗಿದೆ' ಎಂದು ಅವರು ವಿವರಿಸಿದರು.

ಇದಲ್ಲದೆ, ನಿಷೇಧ ಅನುಷ್ಠಾನಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಸಹಕಾರವನ್ನೂ ಕೋರಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯು ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳಿಗೆ ಆದೇಶ ನೀಡಿದೆ.

ಗುಟ್ಕಾ ನಿಷೇಧ ಪ್ರಶ್ನಿಸಿ ಗುಟ್ಕಾ ತಯಾರಿಕಾ ಕಂಪೆನಿಗಳು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯದ ಅಡ್ವೊಕೇಟ್ ಜನರಲ್ (ಎ.ಜಿ) ಪ್ರೊ. ರವಿವರ್ಮ ಕುಮಾರ್ ಅವರ ಜೊತೆ ಸರ್ಕಾರದ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಜಿ. ಅವರೇ ಖುದ್ದಾಗಿ ವಾದ ಮಂಡಿಸಲಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯದಲ್ಲಿದ್ದ ಎಲ್ಲ ಗುಟ್ಕಾ ತಯಾರಿಕಾ ಘಟಕಗಳಿಗೂ ಸರ್ಕಾರ ಬೀಗ ಜಡಿದಿದೆ. ಅಲ್ಲಿ ಈವರೆಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಬದಲಿ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ, ನಿಕೋಟಿನ್ ಮತ್ತು ತಂಬಾಕು ರಹಿತ ಅಡಿಕೆ ಉತ್ಪಾನ್ನಗಳ ತಯಾರಿಕೆಗೆ ಮುಂದಾಗುವಂತೆ ಗುಟ್ಕಾ ಕಂಪೆನಿಗಳಿಗೆ ಸೂಚನೆ ನೀಡಲಾಗಿದೆ.

`ತಂಬಾಕು ಮತ್ತು ನಿಕೋಟಿನ್ ರಹಿತ ಅಡಿಕೆ ಉತ್ಪನ್ನಗಳನ್ನು ನೆರೆ ರಾಜ್ಯಗಳಲ್ಲಿ ತಯಾರಿಸಲಾಗುತ್ತಿದೆ. ಇದು ಅಲ್ಲಿ ಯಶಸ್ಸು ಕಂಡಿದೆ. ಅಂಥ ಉತ್ಪನ್ನಗಳನ್ನು ರಾಜ್ಯದಲ್ಲೂ ತಯಾರಿಸಲು ಈಗಾಗಲೇ ಪರವಾನಗಿ ನೀಡಲಾಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಇಂಥ ಉತ್ಪನ್ನಗಳ ತಯಾರಿಕೆಗೆ ರಾಜ್ಯದ ಗುಟ್ಕಾ ಕಂಪೆನಿಗಳೂ ಮುಂದಾಗಬಹುದು' ಎಂದು ಮದನ್ ಗೋಪಾಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.