ADVERTISEMENT

ಗೃಹ ಸಾಲ: ದಂಡ ರದ್ದು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST
ಗೃಹ ಸಾಲ: ದಂಡ ರದ್ದು
ಗೃಹ ಸಾಲ: ದಂಡ ರದ್ದು   

ನವದೆಹಲಿ (ಪಿಟಿಐ): ಗೃಹ  ಸಾಲ ಪಡೆದವರು ಅವಧಿಗೆ ಮುಂಚೆ ಸಾಲದ ಮೊತ್ತ ಮರುಪಾವತಿಸಿದರೆ ಅದಕ್ಕೆ `ಪೂರ್ವ ಪಾವತಿ ದಂಡ~ ವಿಧಿಸಬಾರದು ಎಂದು ನ್ಯಾಷನಲ್ ಹೌಸಿಂಗ್ ಬ್ಯಾಂಕ್ (ಎನ್‌ಎಚ್‌ಬಿ), ಗೃಹ ನಿರ್ಮಾಣ ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
 
ಸಾಲಗಾರರ ಪಾಲಿಗೆ ಇದು ದೀಪಾವಳಿ ಕೊಡುಗೆಯಾಗಿದೆ. ಸಾಲಗಾರರು ಸಾಲದ ಮೊತ್ತವನ್ನು ಅವಧಿಗೆ ಮೊದಲೇ  ಪಾವತಿ ಮಾಡಿದರೆ, ಇನ್ನು ಮುಂದೆ ಗೃಹ ನಿರ್ಮಾಣ ಹಣಕಾಸು ಸಂಸ್ಥೆಗಳು (ಎಚ್‌ಎಫ್‌ಸಿ) ಅದಕ್ಕೆ  ಪ್ರತ್ಯೇಕ ಶುಲ್ಕವನ್ನಾಗಲಿ ಅಥವಾ ದಂಡವನ್ನಾಗಲಿ ವಿಧಿಸುವಂತಿಲ್ಲ ಎಂದು `ಎನ್‌ಎಚ್‌ಬಿ~ ಅಧಿಸೂಚನೆ ಹೊರಡಿಸಿದೆ.

ಈ ಆದೇಶವನ್ನು ಎಲ್ಲ `ಎಚ್‌ಎಫ್‌ಸಿ~ಗಳು ತಕ್ಷಣದಿಂದಲೇ ಜಾರಿಗೆ ತರಲು ಸೂಚಿಸಲಾಗಿದೆ. ಹಳೆಯ ಮತ್ತು ಹೊಸ ಗೃಹ ಸಾಲಗಾರರಿಗೆ ಬೇರೆ ಬೇರೆ ಬಡ್ಡಿ ದರಗಳನ್ನು ವಿಧಿಸದೇ ಏಕರೂಪತೆ ಕಾಯ್ದುಕೊಳ್ಳಬೇಕು ಎಂದೂ  ನಿರ್ದೇಶನ ನೀಡಲಾಗಿದೆ.

ವಾಣಿಜ್ಯ ಬ್ಯಾಂಕ್‌ಗಳೂ ವಿಧಿಸುವ ಇದೇ ಬಗೆಯ ದಂಡದ ಮೇಲೆ ನಿಷೇಧ ವಿಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಚಿಂತನೆ ನಡೆಸಿದೆ. ಆದರೆ, ವಾಣಿಜ್ಯ ಬ್ಯಾಂಕ್‌ಗಳು ಈ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿವೆ. ಇತ್ತೀಚೆಗೆ ನಡೆದ ಬ್ಯಾಂಕ್ ಗ್ರಾಹಕರ ದೂರುಗಳ ವಿಚಾರಣೆ ನಡೆಸುವವರ  (ಒಂಬುಡ್ಸಮನ್) ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ.

ಎಚ್‌ಡಿಎಫ್‌ಸಿ, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ದಿವಾನ್ ಹೌಸಿಂಗ್, ಪಿಎನ್‌ಬಿ ಹೌಸಿಂಗ್ ಮತ್ತು ಸಹರಾ ಹೌಸಿಂಗ್ ಸೇರಿದಂತೆ ಸದ್ಯಕ್ಕೆ ದೇಶದಲ್ಲಿ 54 ಗೃಹ ನಿರ್ಮಾಣ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳು  ಗೃಹ ಸಾಲದ ಪೂರ್ವ ಪಾವತಿ ಪ್ರಕರಣಗಳಲ್ಲಿ ಗರಿಷ್ಠ ಶೇ 4ರಷ್ಟರವರೆಗೆ ಶುಲ್ಕ ಅಥವಾ ದಂಡ ವಿಧಿಸುತ್ತಿವೆ.

ಅಧಿಸೂಚನೆ ಪ್ರಕಾರ, ಬದಲಾಗುವ ಬಡ್ಡಿ ದರಗಳ ಗೃಹ ಸಾಲಗಳನ್ನು ಅವಧಿಗೆ ಮುಂಚಿತವಾಗಿಯೇ ಪಾವತಿಸಲು ಸಾಲಗಾರರು ಬೇರೆ ಮೂಲಗಳಿಂದ ಸಾಲ ಪಡೆದಿದ್ದರೂ ದಂಡ ವಿಧಿಸಬಾರದು.

ಸ್ಥಿರ ಬಡ್ಡಿ ದರದ ಸಾಲಗಳ     ವಿಷಯದಲ್ಲಿ ಸಾಲಗಾರರು ತಮ್ಮ `ಸ್ವಂತ ಆದಾಯ ಮೂಲ~ಗಳಿಗೆ ಹೊರತಾದ ಬೇರೆ ಕಡೆಗಳಿಂದ ಹಣ ಹೊಂದಿಸಿ ಪಾವತಿಸಿದರೆ ಮಾತ್ರ ಶುಲ್ಕದಿಂದ ವಿನಾಯ್ತಿ ನೀಡಬೇಕು ಎಂದು ಸೂಚಿಸಲಾಗಿದೆ. ಈ `ಸ್ವಂತ ಆದಾಯ ಮೂಲ~ಗಳು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗಿಂತ ಭಿನ್ನವಾಗಿರಬೇಕು.

ಗೃಹ ನಿರ್ಮಾಣ ಹಣಕಾಸು ಸಂಸ್ಥೆಗಳು ತಮ್ಮ ಹಳೆಯ ಮತ್ತು ಹೊಸ ಗ್ರಾಹಕರಿಗೆ ವಿಭಿನ್ನ ಬಗೆಯ ಬದಲಾಗುವ ಬಡ್ಡಿ ದರಗಳನ್ನು ವಿಧಿಸುತ್ತಿರುವುದು ಕೂಡ `ಎನ್‌ಎಚ್‌ಬಿ~ ಗಮನಕ್ಕೆ ಬಂದಿದೆ. ಹಳೆಯ ಗ್ರಾಹಕರಿಗೆ ಹೆಚ್ಚು ಬಡ್ಡಿ ದರ ವಿಧಿಸುವುದು ತಾರತಮ್ಯದ ಧೋರಣೆಯಾಗಿದೆ.

ಇಂತಹ ನಿಲುವು ತಳೆದಿರುವ ಸಂಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ನ್ಯಾಯಪರ ಧೋರಣೆಯ ಕೊರತೆ ಕಂಡು ಬರುತ್ತದೆ ಎಂದು `ಎನ್‌ಎಚ್‌ಬಿ~ ಅಧ್ಯಕ್ಷ ಆರ್. ವಿ. ವರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.