ADVERTISEMENT

ಗೃಹ ಸಾಲ ಶೇ 1ರಷ್ಟು ಬಡ್ಡಿ ಸಬ್ಸಿಡಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST
ಗೃಹ ಸಾಲ ಶೇ 1ರಷ್ಟು ಬಡ್ಡಿ ಸಬ್ಸಿಡಿ ವಿಸ್ತರಣೆ
ಗೃಹ ಸಾಲ ಶೇ 1ರಷ್ಟು ಬಡ್ಡಿ ಸಬ್ಸಿಡಿ ವಿಸ್ತರಣೆ   

ನವದೆಹಲಿ (ಪಿಟಿಐ): ಗೃಹ ಸಾಲಕ್ಕೆ ನೀಡುವ ಶೇ 1ರಷ್ಟು `ಬಡ್ಡಿ ಸಬ್ಸಿಡಿ~ಯನ್ನು ಸರ್ಕಾರ ಇನ್ನೂ ಒಂದು ವರ್ಷದ ಅವಧಿಗೆ (2012-13) ವಿಸ್ತರಿಸಿದೆ. ಇದನ್ನು ಪಡೆಯಬೇಕಾದರೆ ಗೃಹ ಸಾಲದ ಮೊತ್ತ ರೂ.15 ಲಕ್ಷ ಮತ್ತು ಮನೆ ನಿರ್ಮಾಣ ವೆಚ್ಚ ರೂ.25 ಲಕ್ಷ ಮೀರಬಾರದು ಎಂಬ ಮಿತಿಯನ್ನೂ ವಿಧಿಸಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯ ಸಂಪುಟ ಸಭೆ ಮಂಗಳವಾರವೇ ಯೋಜನೆ ವಿಸ್ತರಣೆಗೆ ಅನುಮೋದನೆ ನೀಡಿದೆ. ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಬುಧವಾರ ಇಲ್ಲಿ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

ಈವರೆಗೆ ರೂ.20 ಲಕ್ಷದಲ್ಲಿ ನಿರ್ಮಾಣವಾಗುತ್ತಿದ್ದ ಮನೆಗಳ ಗರಿಷ್ಠ ರೂ.10 ಲಕ್ಷದವರೆಗಿನ ಸಾಲಕ್ಕೆ ಈ ಸಬ್ಸಿಡಿ ನೆರವು ಇದ್ದಿತು. ಆದರೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸೂರಿಲ್ಲದ ಕೆಳ ಮಧ್ಯಮ ವರ್ಗದವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸರ್ಕಾರ ಈ ಯೋಜನೆ ಮಿತಿಯನ್ನು ಹೆಚ್ಚಿಸಿದೆ.

`ಬ್ಯಾಂಕ್ ಬಡ್ಡಿ ದರ ಗರಿಷ್ಠ ಮಟ್ಟದಲ್ಲಿರುವ ಪ್ರಸ್ತುತ ಸಂದರ್ಭದಲ್ಲಿ ಶೇ 1ರಷ್ಟು ಬಡ್ಡಿ ಸಬ್ಸಿಡಿ ವಿಸ್ತರಿಸಿರುವುದು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೆ ಅದೆಷ್ಟೋ ಸಮಾಧಾನ ತಂದಿದೆ~ ಎಂದು ಚಿದಂಬರಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಈ ಯೋಜನೆಯಡಿ ವ್ಯಕ್ತಿಯೊಬ್ಬ ರೂ.15 ಲಕ್ಷದವರೆಗೆ ಸಾಲ ಪಡೆದಿದ್ದರೆ ಆತನಿಗೆ ವರ್ಷಕ್ಕೆ ರೂ.14,912 ಸಬ್ಸಿಡಿ ನೆರವು ಲಭಿಸಲಿದೆ. ರೂ.10 ಲಕ್ಷಕ್ಕೆ ರೂ.9,925 ಸಬ್ಸಿಡಿ ಮಿತಿ ನಿಗದಿಪಡಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ಯಾಂಕುಗಳು ನೀಡುವ ಎಲ್ಲ ರೀತಿಯ ಗೃಹ ಸಾಲಗಳಿಗೂ ಈ ಯೋಜನೆ ಅನ್ವಯಿಸಲಿದೆ.

ಈ ವರ್ಷ ಯೋಜನೆ ವಿಸ್ತರಣೆಗಾಗಿ ಸರ್ಕಾರ ಪ್ರಸಕ್ತ  ಬಜೆಟ್‌ನಲ್ಲಿ ರೂ.400 ಕೋಟಿ ಮೀಸಲಿಟ್ಟಿದೆ. ನ್ಯಾಷನಲ್ ಹೌಸಿಂಗ್ ಬ್ಯಾಂಕ್ (ಎನ್‌ಎಚ್‌ಬಿ) ಈ ಯೋಜನೆ ಜಾರಿ ಉಸ್ತುವಾರಿ ನೋಡಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.