ADVERTISEMENT

ಗ್ರೀಸ್‌ನಲ್ಲಿ ಬಿಕ್ಕಟ್ಟು: ಭಾರತದಲ್ಲಿ ತಲ್ಲಣ

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 13:36 IST
Last Updated 29 ಜೂನ್ 2015, 13:36 IST
ಗ್ರೀಸ್‌ನಲ್ಲಿ ಬಿಕ್ಕಟ್ಟು: ಭಾರತದಲ್ಲಿ ತಲ್ಲಣ
ಗ್ರೀಸ್‌ನಲ್ಲಿ ಬಿಕ್ಕಟ್ಟು: ಭಾರತದಲ್ಲಿ ತಲ್ಲಣ   

ಮುಂಬೈ (ಐಎಎನ್‌ಎಸ್‌): ಗ್ರೀಸ್‌ನಲ್ಲಿ ಮತ್ತೆ ಕಾಣಿಸಿಕೊಂಡಿರುವ ಆರ್ಥಿಕ ಬಿಕ್ಕಟ್ಟು ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ ಅರ್ಥವ್ಯವಸ್ಥೆಯ ಸೋಮವಾರ ದೊಡ್ಡ ಮಟ್ಟದ ನಕಾರಾತ್ಮಕ ಪರಿಣಾಮ ಬೀರಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬೆಳಿಗಿನ ವಹಿವಾಟಿನಲ್ಲಿ ಸುಮಾರು 600 ಅಂಶಗಳಷ್ಟು ಕುಸಿತ ಕಂಡು 27 ಸಾವಿರದ ಗಡಿ ಇಳಿಯಿತು. ಮಧ್ಯಾಹ್ನದ ನಂತರ ಅಂದರೆ, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಗ್ರೀಸ್‌ ಆರ್ಥಿಕ ಪುನಶ್ಚೇತನಕ್ಕೆ ತುರ್ತು ಕ್ರಮ  ಕೈಗೊಳ್ಳುವ ಭರವಸೆ ಪ್ರಕಟಿಸಿದ ನಂತರ ಅಲ್ಪ ಚೇತರಿಕೆ ಕಂಡು 167  ಅಂಶ ಹಾನಿಯೊಂದಿಗೆ 27,645 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಯಾಕೆ ಬಿಕ್ಕಟ್ಟು? ಐಎಂಎಫ್‌ನಿಂದ ಪಡೆದ ಸಾಲವನ್ನು ಮರು ಪಾವತಿಸಲು ಗ್ರೀಸ್‌ಗೆ ಜೂನ್‌ 30 ಕೊನೆಯ ಗಡುವಾಗಿತ್ತು. ಆದರೆ, ನಿಗದಿತ ಸಮಯದೊಳಗೆ ಸಾಲ ಮರುಪಾವತಿಸಲು ಗ್ರೀಸ್‌ ವಿಫಲವಾಗಲಿದೆ ಎಂಬ ವಿಶ್ಲೇಷಣೆಗಳು  ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಈ ಸುದ್ದಿಯು ಜಾಗತಿಕ ಷೇರುಪೇಟೆಗಳಲ್ಲಿ ತಲ್ಲಣ ಮೂಡಿಸಿತು. ಆತಂಕಕ್ಕೆ ಒಳಗಾದ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಗಿಬಿದ್ದರು.

ಕಳೆದ 5 ವರ್ಷಗಳಿಂದ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಗ್ರೀಸ್‌  ಇನ್ನೂ ಅದರಿಂದ ಹೊರಬಂದಿಲ್ಲ ಎಂಬ ಸಂಗತಿಯು ದೊಡ್ಡ ಪ್ರಮಾಣದಲ್ಲಿ ಹಣಕಾಸು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು.

ಆರ್‌ಬಿಐ ಸಲಹೆ ಕೇಳಿದ ಕೇಂದ್ರ: ಗ್ರೀಸ್ ಬಿಕ್ಕಟ್ಟಿನಿಂದಾಗಿ  ಭಾರತದ ಷೇರುಪೇಟೆಯಲ್ಲಿ ಬಂಡವಾಳ ತೊಡಗಿಸಿರುವ ಹೂಡಿಕೆದಾರರು ಬೃಹತ್‌ ಪ್ರಮಾಣದಲ್ಲಿ ಬಂಡವಾಳ ಹಿಂತೆಗೆಯುವ ಆತಂಕ ಎದುರಾಗಿದೆ. ಕೇಂದ್ರ ಸರ್ಕಾರ ಈ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಸಲಹೆ ಕೇಳಿದೆ. 

ನೇರ ಪರಿಣಾಮ ಇಲ್ಲ: ಗ್ರೀಸ್‌ ಬಿಕ್ಕಟ್ಟು ಭಾರತದ ಮೇಲೆ ನೇರ ಪರಿಣಾಮ ಬೀರುವುದಿಲ್ಲ, ಆದರೆ, ಯೂರೋಪ್‌ ಮೂಲಕ ಭಾರತದ ಮಾರುಕಟ್ಟೆಗೆ ಹರಿದುಬರುವ ಮತ್ತು ಇಲ್ಲಿಂದ ಹೊರ ಹೋಗುವ ಬಂಡವಾಳದ ಮೇಲೆ ಇದು ಪರೋಕ್ಷ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ರಾಜೀವ್‌ ಮಹರ್ಷಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.