ADVERTISEMENT

ಚಹಾ ರಫ್ತು ಕುಸಿತ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ನವದೆಹಲಿ (ಪಿಟಿಐ): ದೇಸಿ ಚಹಾ  ರಫ್ತು ಪ್ರಸ್ತುತ ವರ್ಷದಲ್ಲಿ ಶೇ 4ರಷ್ಟು  ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ಚಹಾ ಬೆಳೆಗಾರರ ಸಲಹಾ ಸಮಿತಿ(ಸಿಸಿಪಿಎ) ತಿಳಿಸಿದೆ.ಕಳೆದ ವರ್ಷ 193 ದಶಲಕ್ಷ ಕೆಜಿಗಳಷ್ಟು ಚಹಾ ರಫ್ತು ಮಾಡಲಾಗಿತ್ತು. ಪ್ರಸಕ್ತ ಅವಧಿಯಲ್ಲಿ ಇದು 185 ದಶಲಕ್ಷ ಕೆಜಿಗಳಿಗೆ ಇಳಿಕೆಯಾಗಬಹುದು ಎಂದು `ಸಿಸಿಪಿಎ~ ಅಂದಾಜಿಸಿದೆ.

ಚಹಾ ಮಂಡಳಿ ಅಂಕಿ ಅಂಶಗಳ  ಪ್ರಕಾರ, ಜನವರಿಯಿಂದ ಜುಲೈ ಅವಧಿಯಲ್ಲಿ ಪಾಕಿಸ್ತಾನ ಹೊರತುಪಡಿಸಿ ಬೇರೆ ದೇಶಗಳಿಗೆ ರಫ್ತಾಗುವ ಚಹಾ ವಹಿವಾಟಿನಲ್ಲಿ ಕುಸಿತ ಉಂಟಾಗಿದೆ. ಇರಾನ್‌ನಲ್ಲಿ ಸಾಂಪ್ರದಾಯಿಕ ಚಹಾಕ್ಕೆ ಹೆಚ್ಚಿನ ಮಾರುಕಟ್ಟೆ ಇದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಏಷಿಯನ್ ಕ್ಲಿಯರಿಂಗ್ ಪಾವತಿಯನ್ನು ರದ್ದು ಪಡಿಸಿರುವುದೇ ರಫ್ತು ಇಳಿಮುಖವಾಗಲು ಪ್ರಮುಖ  ಕಾರಣ ಎನ್ನಲಾಗಿದೆ. ದೀರ್ಘ ಕಾಲದ ಈ ಪಾವತಿಗೆ ಸಂಬಂಧಿಸಿದ ಬಿಕ್ಕಟ್ಟು ಬಗೆಹರಿಸಲು ಭಾರತೀಯ ಬ್ಯಾಂಕುಗಳಾದ ಯೂಕೊ ಹಾಗೂ ಐಡಿಬಿಐ ಜೊತೆ ಸೇರಿ ರೂಪಾಯಿ ಖಾತೆ ತೆರೆಯಲು ಇರಾನಿನ ಕೇಂದ್ರೀಯ ಬ್ಯಾಂಕ್‌ಗೆ `ಆರ್‌ಬಿಐ~ ಒಪ್ಪಿಗೆ ಸೂಚಿಸಿದೆ.`ಸಿಸಿಪಿಎ~ಯ ಇತ್ತೀಚಿನ ಸಮೀಕ್ಷೆ ಪ್ರಕಾರ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ಅವಧಿಯಲ್ಲಿ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಚಹಾ ಉತ್ಪಾದನೆ ಕುಸಿಯಲಿದ್ದು ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯ ಇದಕ್ಕೆ ಕಾರಣ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.