ADVERTISEMENT

ಚಹಾ ರಫ್ತು ಪ್ರಮಾಣ ಕುಸಿತ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:15 IST
Last Updated 16 ಫೆಬ್ರುವರಿ 2011, 18:15 IST

ನವದೆಹಲಿ (ಪಿಟಿಐ): 2010ನೇ ಸಾಲಿನಲ್ಲಿ ಸರ್ಕಾರ ಹೊಂದಿದ್ದ ಉದ್ದೇಶಿತ ಚಹಾ ರಫ್ತು ಗುರಿ ಶೇ 2.4ರಷ್ಟು ಕುಸಿತ ಕಂಡಿದ್ದು, 200 ದಶಲಕ್ಷ ಟನ್‌ಗಳಿಂದ 193 ಟನ್‌ಗಳಿಗೆ ಇಳಿದಿದೆ ಎಂದು ಭಾರತೀಯ ಚಹಾ ಮಂಡಳಿ ಪ್ರಕಟಣೆ ತಿಳಿಸಿದೆ.

2009ರಲ್ಲಿ ದೇಶದಿಂದ 198 ದಶಲಕ್ಷ ಟನ್ ಚಹಾ ರಫ್ತಾಗಿತ್ತು. ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಅಸ್ಸಾಂ ತಳಿ ಚಹಾ ಉತ್ಪಾದನೆ ಈ ಬಾರಿ ತಗ್ಗಿರುವುದು ಒಟ್ಟಾರೆ ರಫ್ತು ಗುರಿಯ ಮೇಲೆ ಪ್ರತಿಕೂಲ ಪರಿಣಾಮಮ ಬೀರಿದೆ ಎಂದು ಭಾರತೀಯ ಚಹಾ ಒಕ್ಕೂಟದ ಜಂಟಿ ಕಾರ್ಯದರ್ಶಿ ಸುಜಿತ್ ಪಟ್ರಾ ತಿಳಿಸಿದ್ದಾರೆ.
ಭಾರತದ ಒಟ್ಟಾರೆ ಚಹಾ ಉತ್ಪಾದನೆ ಈ ಅವಧಿಯಲ್ಲಿ ಶೇ 1.3ರಷ್ಟು ಕುಸಿತ ಕಂಡಿದ್ದು, 979 ದಶಲಕ್ಷ ಟನ್‌ಗಳಿಂದ 966 ಟನ್‌ಗಳಿಗೆ ಕುಸಿದಿದೆ. ದೇಶದ ಒಟ್ಟು ಉತ್ಪಾದನೆಗೆ ಅರ್ಧದಷ್ಟು ಕೊಡುಗೆ ನೀಡುವ ಅಸ್ಸಾಂನಲ್ಲಿ ಈ ಬಾರಿ ಪ್ರತಿಕೂಲ ಹವಾಮಾನ ಮತ್ತು ಕೀಟಬಾಧೆಯಿಂದ ಉತ್ಪಾದನೆ ಗಣನೀಯವಾಗಿ ತಗ್ಗಿರುವುದು ರಫ್ತು ಹಿನ್ನಡೆಗೆ  ಮುಖ್ಯ ಕಾರಣವಾಗಿದೆ.

ವಿಯಟ್ನಾಂ ಮತ್ತು ಇಂಡೊನೇಷ್ಯಾದಿಂದ ವಿದೇಶಿ ಮಾರುಕಟ್ಟೆಗೆ ಹೆಚ್ಚಿನ ಚಹಾ ರಫ್ತಾಗುತ್ತಿವೆ. ಶ್ರೀಲಂಕಾ ಮತ್ತು ಕಿನ್ಯಾದ ‘ಸಿಟಿಸಿ’  ಚಹಾ ತಳಿಗೂ ಹೆಚ್ಚಿನ ಬೇಡಿಕೆ ಇದೆ.  ಒಟ್ಟು ರಫ್ತು ಕುಸಿದಿದ್ದರೂ, ಈ ಅವಧಿಯಲ್ಲಿ ರಷ್ಯಾ, ಪಾಕಿಸ್ತಾನ ಮತ್ತು ಇರಾನ್‌ಗೆ ಭಾರತ ರಫ್ತು ಮಾಡುವ ಚಹಾ ಪ್ರಮಾಣ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.