ADVERTISEMENT

ಚಿನ್ನಾಭರಣ ವರ್ತಕರ ಪ್ರತಿಭಟನೆ ಅಂತ್ಯ:ಪ್ರಣವ್ ಮುಖರ್ಜಿ, ಸೋನಿಯಾ ಗಾಂಧಿ ಭೇಟಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಬ್ರಾಂಡ್ ರಹಿತ ಚಿನ್ನಾಭರಣಗಳ ಮೇಲೆ ಅಬಕಾರಿ ಸುಂಕ ವಿಧಿಸುವ  ನಿರ್ಧಾರ  ಮರುಪರಿಶೀಲಿಸುವುದಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ, ಕಳೆದ 21 ದಿನಗಳಿಂದ ದೇಶದಾದ್ಯಂತ ನಡೆಸುತ್ತಿರುವ ಪ್ರತಿಭಟನೆಯನ್ನು ಚಿನ್ನಾಭರಣ ವರ್ತಕರ ಸಂಘಟನೆಗಳು ಶುಕ್ರವಾರ ಕೈಬಿಟ್ಟಿವೆ.

`ಮೇ 10ರವರೆಗೆ ಪ್ರತಿಭಟನೆಯನ್ನು  ತಾತ್ಕಾಲಿಕವಾಗಿ ಕೈ ಬಿಡಲು ನಾವು ನಿರ್ಧರಿಸಿದ್ದೇವೆ~ ಎಂದು ಅಖಿಲ ಭಾರತ ಸರಾಫ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಹೇಳಿದ್ದಾರೆ.ಕರೋಲ್ ಭಾಗ್ ಚಿನ್ನಾಭರಣ ವರ್ತಕರ ಒಕ್ಕೂಟದ ಅಧ್ಯಕ್ಷ ವಿಜಯ್ ಖನ್ನಾ ಅವರು ಕೂಡ ಪ್ರತಿಭಟನೆಯನ್ನು ಹಿಂದೆ ಪಡೆದಿರುವುದಾಗಿ ತಿಳಿಸಿದ್ದಾರೆ.

ಚಿನ್ನಾಭರಣ ವರ್ತಕರ ಪ್ರತಿನಿಧಿಗಳು ಶುಕ್ರವಾರ ನವದೆಹಲಿಯಲ್ಲಿ ಸಚಿವ ಪ್ರಣವ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಬ್ರಾಂಡ್ ರಹಿತ ಚಿನ್ನಾಭರಣಗಳ ಮೇಲೆ ವಿಧಿಸಿರುವ ಶೇ 1ರಷ್ಟು ಅಬಕಾರಿ ಸುಂಕ ಹಿಂಪಡೆಯುವಂತೆ ಆಗ್ರಹಿಸಿದರು.

ಆದರೆ, ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಬೇಕೆ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ನಾವು ಶನಿವಾರ ಅಥವಾ ಭಾನುವಾರ ಇತರ ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಲಿದ್ದೇವೆ~ ಎಂದು  ಮುಂಬೈ ಚಿನಿವಾರ ಪೇಟೆ ಒಕ್ಕೂಟದ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಹೇಳಿದ್ದಾರೆ.

`ಪ್ರತಿಭಟನೆಯಿಂದಾಗಿ ಚಿನ್ನಾಭರಣ ಉದ್ಯಮಕ್ಕೆ ರೂ 20,000 ಕೋಟಿ ಮತ್ತು ದೇಶದ ಬೊಕ್ಕಸಕ್ಕೆ ಸುಮಾರು ರೂ1,200 ಕೋಟಿಗಳಷ್ಟು ನಷ್ಟವುಂಟಾಗಿದೆ ಎಂದು ಅಖಿಲ ಭಾರತ ಚಿನ್ನಾಭರಣ ವರ್ತಕರ ಒಕ್ಕೂಟದ ಅಧ್ಯಕ್ಷ ಬಛ್‌ರಾಜ್ ಬಾಮಲ್ವಾ ಸುದ್ದಿಗಾರರಿಗೆ ತಿಳಿಸಿದರು.

`ಸಂಸತ್ತಿನಲ್ಲಿ 2012ರ ಆರ್ಥಿಕ ಮಸೂದೆ ಚರ್ಚೆಗೆ ಬರುವ ಸಂದರ್ಭದಲ್ಲಿ  ಚಿನ್ನಾಭರಣ ವರ್ತಕರ ಆತಂಕಗಳನ್ನು ನಿವಾರಿಸುವ ಯತ್ನ ಮಾಡಲಾಗುವುದು ಎಂದು ಮುಖರ್ಜಿ ಅವರು ವರ್ತಕರಿಗೆ ಭರವಸೆ ನೀಡಿದ್ದಾರೆ~ ಎಂದು ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿಯ ಅಧ್ಯಕ್ಷ ಎಸ್.ಕೆ. ಗೋಯಲ್ ಹೇಳಿದ್ದಾರೆ.
ದೇಶದಾದ್ಯಂತ ಚಿನ್ನಾಭರಣ ವರ್ತಕರು ಮಾರ್ಚ್ 17ರಿಂದ ಪ್ರತಿಭಟನೆ  ನಡೆಸುತ್ತ್ದ್ದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.