ADVERTISEMENT

ಚಿನ್ನ, ಪ್ಲಾಟಿನಂ ಇನ್ನಷ್ಟು ತುಟ್ಟಿ?

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಬಜೆಟ್‌ನಲ್ಲಿ ದುಬಾರಿ ಲೋಹಗಳ ಮೇಲಿನ ಆಮದು ಶುಲ್ಕ ಹೆಚ್ಚಿಸಿರುವ ಹಿನ್ನೆಲೆಯಲ್ಲಿ,ಮುಂಬರುವ ದಿನಗಳಲ್ಲಿ ಚಿನ್ನ ಮತ್ತು ಪ್ಲಾಟಿನಂ ಆಭರಣಗಳು ಇನ್ನಷ್ಟು ತುಟ್ಟಿಯಾಗುವ ಸಾಧ್ಯತೆ ಇದೆ.

ಸ್ಟ್ಯಾಂಡರ್ಡ್ (99.5 ಶುದ್ಧತೆ) ಚಿನ್ನದ ಗಟ್ಟಿ, ನಾಣ್ಯ ಮತ್ತು ಪ್ಲಾಟಿನಂ  ಮೇಲಿನ ಪ್ರಾಥಮಿಕ ಸೀಮಾ ಸುಂಕವನ್ನು ಶೇ 2ರಿಂದ ಶೇ 4ರಷ್ಟು ಹೆಚ್ಚಿಸಲಾಗಿದೆ. ಸ್ಟ್ಯಾಂಡರ್ಡ್ ಅಲ್ಲದ ಚಿನ್ನಾಭರಣಗಳ ಮೇಲಿನ ತೆರಿಗೆಯನ್ನು ಸದ್ಯದ ಶೇ 5ರಿಂದ ಶೇ 10ಕ್ಕೆ ಹೆಚ್ಚಿಸಲಾಗಿದೆ.  ಈ ಹೆಚ್ಚಳದಿಂದ ಚಿನ್ನದ ಆಭರಣಗಳ ಬೆಲೆಯಲ್ಲಿ ಶೇ 3ರಿಂದ ಶೇ 4ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ (10 ಗ್ರಾಂಗಳಿಗೆ ಗರಿಷ್ಠ ಅಂದಾಜು ರೂ 1,200) ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

`ವರ್ತಕರು ಅಬಕಾರಿ ಮತ್ತು ಸೀಮಾ ಸುಂಕದ ಹೆಚ್ಚಳವನ್ನು ಗ್ರಾಹಕರ ಮೇಲೆ ವರ್ಗಾಯಿಸುತ್ತಾರೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಶೀಘ್ರದಲ್ಲೇ ಏರಿಕೆಯಾಗಲಿದೆ~ ಎಂದು ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿಯ ಅಧ್ಯಕ್ಷ ಸಂಜಯ್ ಕೊಠಾರಿ ಅಭಿಪ್ರಾಯಪಟ್ಟಿದ್ದಾರೆ. ಚಿನ್ನದ ಅದಿರಿನ ಮೇಲಿನ ಪ್ರಾಥಮಿಕ ತೆರಿಗೆ ಮತ್ತು ಚಿನ್ನ ಶುದ್ಧೀಕರಣದ ಮೇಲಿನ ಸುಂಕವನ್ನೂ ಶೇ 2ರಷ್ಟು ಹೆಚ್ಚಿಸಲಾಗಿದೆ. ಶುದ್ಧೀಕರಿಸಿದ ಚಿನ್ನದ ಮೇಲಿನ ಅಬಕಾರಿ ತೆರಿಗೆಯನ್ನು ಈಗಿನ ಶೇ1.5ರಿಂದ ಶೇ 3ಕ್ಕೆ ಏರಿಕೆ ಮಾಡಲಾಗಿದೆ.

ಅಕ್ರಮ ವಹಿವಾಟು: ಆಮದು ದರ ಹೆಚ್ಚಿಸಿರುವುದರಿಂದ ಚಿಲ್ಲರೆ ವಹಿವಾಟುದಾರರಿಗೆ ಚಿನ್ನ ಇನ್ನಷ್ಟು  ತುಟ್ಟಿಯಾಗಲಿದೆ.  ಇದರಿಂದ ಚಿನ್ನದ ಕಳ್ಳಸಾಗಾಣಿಕೆ, ಅಕ್ರಮ ವಹಿವಾಟು ಕೂಡ ಹೆಚ್ಚುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ಚಿನ್ನಾಭರಣ ಮಾರುಕಟ್ಟೆಯ ಪ್ರಧಾನ ಕಾರ್ಯದರ್ಶಿ ಸುರೇಂದ್ರರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಮೂರು ತ್ರೈಮಾಸಿಕ ಅವಧಿಗಳಲ್ಲಿ ಚಿನ್ನಾಭರಣಗಳ ಆಮದು ಶೆ 50ರಷ್ಟು ಹೆಚ್ಚಳ ಕಂಡಿದೆ.

ಚಿನ್ನದ ಬೆಲೆ ಏರಿಕೆ
 ಆಮದು ತೆರಿಗೆ ಹೆಚ್ಚಿಸಿದ ಬೆನ್ನಲ್ಲೇ, ಚಿನ್ನದ ದರ ಶುಕ್ರವಾರದ ವಹಿವಾಟಿನಲ್ಲಿ 10 ಗ್ರಾಂಗಳಿಗೆ ರೂ 450 ಏರಿಕೆ ಕಂಡಿದ್ದು, ರೂ 28,140ರಷ್ಟಾಗಿದೆ. ಬೆಳ್ಳಿ ಧಾರಣೆಯೂ ಕೆ.ಜಿಗೆ ರೂ 56,500ಕ್ಕೆ ಜಿಗಿದಿದ್ದು, ರೂ 300 ಏರಿಕೆ ಕಂಡಿದೆ. ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಬಹುದು ಎನ್ನುವ ಆತಂಕದಿಂದ ಖರೀದಿ ಒತ್ತಡ ಹೆಚ್ಚಿದ್ದೇ ಚಿನ್ನದ ಬೆಲೆ ಏರಿಕೆಗೆ ಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.