ADVERTISEMENT

ಚಿನ್ನ, ಬೆಳ್ಳಿ ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಬುಧವಾರ ನಡೆದ ದೀಪಾವಳಿ ವಿಶೇಷ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗಳಿಗೆ ರೂ 730 ಹಾಗೂ ಬೆಳ್ಳಿ ಧಾರಣೆ ಕೆ.ಜಿಗೆ ರೂ 2,300 ಏರಿಕೆಯಾಗಿವೆ.

ದೀಪಾವಳಿ ಹಿನ್ನೆಲೆಯಲ್ಲಿ ಚಿನ್ನದ ಚಿಲ್ಲರೆ ಖರೀದಿ ಹೆಚ್ಚಿದ್ದು, ದೆಹಲಿಯಲ್ಲಿ 10 ಗ್ರಾಂಗಳಿಗೆ ರೂ 27,890 ಬೆಲೆ ದಾಖಲಾಯಿತು. ನಾಣ್ಯ ತಯಾರಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಳ್ಳಿ ಬೆಲೆಯೂ ಕೆ.ಜಿಗೆ ರೂ 56,000 ತಲುಪಿದೆ.

ದೀಪಾವಳಿಯಂದು ಚಿನ್ನಾಭರಣ  ಖರೀದಿಸುವುದು ಒಳ್ಳೆಯದು ಎಂಬ  ಭಾವನೆ ಇದೆ. ಇದರ ಜತೆಗೆ ಲಕ್ಷ್ಮೀ ಪೂಜೆಗಾಗಿ ಬೆಳ್ಳಿ ನಾಣ್ಯಗಳನ್ನು ಖರೀದಿಸುವ ಪ್ರವೃತ್ತಿಯೂ ದೇಶದ ಹಲವೆಡೆ ಇದೆ. ಈ ಸಂಗತಿಗಳ ಹಿನ್ನೆಲೆಯಲ್ಲಿ ಇವೆರಡೂ  ಲೋಹಗಳ ಬೆಲೆ ಗಣನೀಯ ಏರಿಕೆ ಕಂಡಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ  ಪ್ರತಿ ಔನ್ಸ್‌ಗೆ 1,700 ಡಾಲರ್ ಏರಿಕೆಯಾಗಿದೆ. ಇದು ಕಳೆದ ಒಂದು ತಿಂಗಳಲ್ಲಿ ದಾಖಲಾಗಿರುವ ಗರಿಷ್ಠ ಧಾರಣೆ. ದೇಶೀಯ ಮಾರುಕಟ್ಟೆಯಲ್ಲಿ 99.9 ಮತ್ತು 99.5 ಶುದ್ಧತೆ ಚಿನ್ನದ ಬೆಲೆ 10 ಗ್ರಾಂಗಳಿಗೆ ಕ್ರಮವಾಗಿ ರೂ 27,890 ಮತ್ತು ರೂ 27,750ರಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.