ನವದೆಹಲಿ (ಪಿಟಿಐ): 2012-13ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಐದು ರಾಜ್ಯಗಳ ವಿಧಾನ ಸಭೆ ಚುನಾವಣೆ ಮುಗಿದ ನಂತರ ಮಂಡಿಸಲಾಗುವುದು ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.
ಆದರೆ,ಬಜೆಟ್ ಮಂಡಿಸುವ ದಿನವನ್ನು ಸರ್ಕಾರ ಇನ್ನೂ ಅಂತಿಮಗೊಳಿಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಜನವರಿ 30ರಿಂದ ಪ್ರಾರಂಭವಾಗಿ ಮಾರ್ಚ್ 3ರಂದು ಕೊನೆಗೊಳ್ಳಲಿದೆ. ಗೋವಾ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳ ಚುನಾವಣೆ ಫೆಬ್ರುವರಿ 29ರ ಒಳಗೆ ಪೂರ್ಣಗೊಳ್ಳಲಿದ್ದು, ಮಾರ್ಚ್ 4ರಿಂದ ಮತ ಎಣಿಕೆ ಪ್ರಾರಂಭವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸಾಮಾನ್ಯವಾಗಿ ಫೆಬ್ರುವರಿ ತಿಂಗಳ ಕೊನೆಯ ಕೆಲಸದ ದಿನದಂದು ಬಜೆಟ್ ಮಂಡಿಸಲಾಗುತ್ತದೆ. ಚುನಾವಣೆ ಹಿನ್ನೆಲೆಯಲ್ಲಿ, ಬಜೆಟ್ ಮುಂದೂಡುವುದಿಲ್ಲ ಎಂದು ಈ ಹಿಂದೆ ಮುಖರ್ಜಿ ಹೇಳಿದ್ದರು.
ಜನವರಿ 11ರಿಂದ ಬಜೆಟ್ ಪೂರ್ವ ಚರ್ಚೆಗಳು ನಡೆಯಲಿದ್ದು, ಕೃಷಿ, ವಾಣಿಜ್ಯ, ಆರ್ಥಿಕ ತಜ್ಞರು, ಕೈಗಾರಿಕೋದ್ಯಮಿಗಳ ಜತೆ ಪ್ರಣವ್ ಮಾತುಕತೆ ನಡೆಸಲಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.