ADVERTISEMENT

ಜನವರಿ ಜಿಎಸ್‌ಟಿ ಸಂಗ್ರಹ ಕುಸಿತ

ಒಂದೇ ಜಿಎಸ್‌ಟಿ ದರ ಜಾರಿ ಅಸಾಧ್ಯ; ಹಣಕಾಸು ಸಚಿವ ಅರುಣ್ ಜೇಟ್ಲಿ

ಪಿಟಿಐ
Published 27 ಫೆಬ್ರುವರಿ 2018, 19:35 IST
Last Updated 27 ಫೆಬ್ರುವರಿ 2018, 19:35 IST
ಜನವರಿ ಜಿಎಸ್‌ಟಿ ಸಂಗ್ರಹ ಕುಸಿತ
ಜನವರಿ ಜಿಎಸ್‌ಟಿ ಸಂಗ್ರಹ ಕುಸಿತ   

ನವದೆಹಲಿ: ಜನವರಿ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ₹ 86,318 ಕೋಟಿಗಳಷ್ಟಾಗಿದ್ದು, ಡಿಸೆಂಬರ್‌ ತಿಂಗಳ ₹ 86,703 ಕೋಟಿಗೆ ಹೋಲಿಸಿದರೆ ಅಲ್ಪ ಪ್ರಮಾಣದ ಕುಸಿತ ಕಂಡು ಬಂದಿದೆ.

ಈ ತಿಂಗಳ 25ರವರೆಗೆ ಪಾವತಿಯಾದ ತೆರಿಗೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.  ನವೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿನ ಕುಸಿತದ ನಂತರ ಡಿಸೆಂಬರ್‌ನಲ್ಲಿ ತೆರಿಗೆ ಸಂಗ್ರಹ ಏರಿಕೆ ದಾಖಲಿಸಿತ್ತು. ಜಿಎಸ್‌ಟಿ ಮಂಡಳಿಯು 200ಕ್ಕೂ ಹೆಚ್ಚು ಸರಕುಗಳ ಮೇಲಿನ ಜಿಎಸ್‌ಟಿ ದರ ತಗ್ಗಿಸಿದ್ದರಿಂದ ವರಮಾನ ಏರಿಕೆ ಕಂಡಿತ್ತು.

ರಾಜಿ ತೆರಿಗೆ (ಕಂಪೋಸಿಷನ್‌ ಸ್ಕೀಮ್‌) ವ್ಯವಸ್ಥೆ ಆಯ್ಕೆ ಮಾಡಿಕೊಂಡವರು ಪ್ರತಿ ಮೂರು ತಿಂಗಳಿಗೊಮ್ಮೆ ಮತ್ತು  ಉಳಿದವರು ಪ್ರತಿ ತಿಂಗಳೂ ರಿಟರ್ನ್‌ ಸಲ್ಲಿಸಬೇಕಾಗುತ್ತದೆ.

ADVERTISEMENT

ಒಂದೇ ಜಿಎಸ್‌ಟಿ ದರ ಅಸಾಧ್ಯ: ‘ದೇಶದಲ್ಲಿ ವ್ಯಾಪಕ ವೈವಿಧ್ಯತೆ ಮತ್ತು ಸಂಪತ್ತಿನ ಅಸಮಾನತೆ ಇರುವುದರಿಂದ ಒಂದೇ ಜಿಎಸ್‌ಟಿ ದರ ಜಾರಿಗೆ ತರುವುದು ಸಾಧ್ಯವಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ತೆರಿಗೆ ಪಾವತಿಸುವಲ್ಲಿ ಸುಧಾರಣೆ ಕಂಡು ಬಂದ ನಂತರ ಈ ವ್ಯವಸ್ಥೆಯಲ್ಲಿ ಇನ್ನಷ್ಟು ಬದಲಾವಣೆ ತರಲಾಗುವುದು ಎಂದು ಅವರು ಹೂಡಿಕೆದಾರರಿಗೆ ಭರವಸೆ ನೀಡಿದ್ದಾರೆ. ಇಲ್ಲಿ ನಡೆದ ಭಾರತ– ಕೊರಿಯಾ ಶೃಂಗಮೇಳದಲ್ಲಿ ಅವರು ಮಾತನಾಡುತ್ತಿದ್ದರು.

‘ಸರ್ಕಾರ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಶೇ 28ರ ತೆರಿಗೆ ದರದ ವ್ಯಾಪ್ತಿಗೆ ಒಳಪಟ್ಟ ಸರಕು ಮತ್ತು ಸೇವೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ. ಸಮಾಜದಲ್ಲಿನ ಆರ್ಥಿಕ ಅಸಮಾನತೆ ಕಾರಣಕ್ಕೆ ವಿಲಾಸಿ ಸರಕುಗಳ ಮೇಲೆ ಶೇ 5ರಷ್ಟು ತೆರಿಗೆ ವಿಧಿಸಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.