ADVERTISEMENT

ಜಮಾ ಆಗದ ಹಣ: ರೈತರ ಪರದಾಟ

ಬೆಂಬಲ ಬೆಲೆಗೆ ಕಡಲೆ ಖರೀದಿ: ₹111.81 ಕೋಟಿ ಹಣ ಬಾಕಿ

​ಪ್ರಜಾವಾಣಿ ವಾರ್ತೆ
Published 14 ಮೇ 2018, 19:30 IST
Last Updated 14 ಮೇ 2018, 19:30 IST

ಹುಬ್ಬಳ್ಳಿ: ‘ಬ್ಯಾಂಕ್‌ ಖಾತೆ ನಂಬರ್, ಪಾಸ್‌ ಬುಕ್‌ ಜೆರಾಕ್ಸ್‌ ಪ್ರತಿ, ಆಧಾರ್‌ ಸಂಖ್ಯೆ... ಎಲ್ಲವನ್ನೂ ಕೊಟ್ಟಿದ್ದೇವೆ. ಆದರೆ, ಬ್ಯಾಂಕ್‌ ಖಾತೆಗೆ ಹಣ ಮಾತ್ರ ಜಮಾ ಮಾಡಿಲ್ಲ. ನಿತ್ಯ ಬ್ಯಾಂಕಿಗೆ ಹೋಗಿ ಮ್ಯಾನೇಜರ್‌ ಅವರನ್ನು ಕೇಳಿ ಬರುವುದೇ ಕೆಲಸವಾಗಿದೆ’

ಇದು ಅಣ್ಣಿಗೇರಿಯ ರೈತ ಸುಭಾಷ ವೈ.ಕೆ ಅವರ ಮಾತು. ಇದು ಅವರೊಬ್ಬರ ಮಾತಲ್ಲ. ಸರ್ಕಾರ ಘೋಷಿಸಿದ ಬೆಂಬಲ ಬೆಲೆಗೆ ಕಡಲೆ ಮಾರಾಟ ಮಾಡಿದ ಸಾವಿರಾರು ರೈತರ ಮಾತೂ ಇದೇ ಆಗಿದೆ.

‘ಮಾರುಕಟ್ಟೆಯಲ್ಲಿ ಕಡಲೆ ಬೆಲೆ ಕುಸಿದಾಗ ಸರ್ಕಾರ ಬೆಂಬಲ ಬೆಲೆ ಘೋಷಿಸಿತು. ಈ ಕಾರಣಕ್ಕೆ ಖಾಸಗಿಯವರಿಗೆ ಕೊಡದೆ, ಸರ್ಕಾರದ ಖರೀದಿ ಕೇಂದ್ರದಲ್ಲೇ ಕಡಲೆ ಮಾರಾಟ ಮಾಡಿದೆ. ವಾರದಲ್ಲಿ ಹಣ ಕೊಡುವ ಭರವಸೆಯನ್ನೂ ನೀಡಲಾಗಿತ್ತು. ಆದರೆ, ಇದುವರೆಗೂ ಹಣ ಕೊಟ್ಟಿಲ್ಲ. ಸಾಲ ಮಾಡಿ, ಮಗಳ ಮದುವೆ ಮಾಡಿದೆ. ಅದರ ಬಡ್ಡಿ ಕಟ್ಟಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೇಗ ಹಣ ಕೊಟ್ಟರೆ ಉಪಕಾರ ಆಗುತ್ತದೆ’ ಎನ್ನುತ್ತಾರೆ ಅಮರಗೋಳದ ರೈತ ಶರಣಪ್ಪ ಮರದ.

ADVERTISEMENT

‘ಬ್ಯಾಂಕ್‌ ಖಾತೆಗೆ ಹಣ ಜಮಾ ಆಗದ್ದರಿಂದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಕಚೇರಿಗೂ ನಿತ್ಯ ಅಲೆಯುವುದಾಗಿದೆ. ನನ್ನ ಹಾಗೆಯೇ ನೂರಾರು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ತಕ್ಷಣ ಹಣ ಬಿಡುಗಡೆ ಮಾಡಿ, ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ಅವರು ಆಗ್ರಹಪಡಿಸಿದರು.

ಫೆ.23ರಿಂದ ಏಪ್ರಿಲ್‌ 22ರವರೆಗೆ ಸಹಕಾರ ಮಹಾಮಂಡಳ ಕಡಲೆಯನ್ನು ಖರೀದಿಸಿತ್ತು. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಕಡಲೆ ₹3,400 ರಿಂದ 3,700ವರೆಗೆ ಮಾರಾಟವಾಗುತ್ತಿತ್ತು. ಬೆಂಬಲ ಬೆಲೆಗೆ ಮಾರಾಟ ಮಾಡಿದರೆ, ಕ್ವಿಂಟಲ್‌ಗೆ ₹700 ರಿಂದ 1,000ವರೆಗೆ ಹೆಚ್ಚಿಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ರೈತರು ದಿನಗಟ್ಟಲೇ ಕಾದು ಕಡಲೆ ಮಾರಾಟ ಮಾಡಿದ್ದರು. ಆದರೆ, ಹಣ ಪಾವತಿಯಾಗದ್ದರಿಂದ ಈಗ ತೊಂದರೆ ಎದುರಿಸುತ್ತಿದ್ದಾರೆ.

‘ರೈತರಿಗೆ ಇಲ್ಲಿಯವರೆಗೆ ಹಣ ಜಮಾ ಆಗಿಲ್ಲ. ಈಗ ₹ 30 ಕೋಟಿ ಬಿಡುಗಡೆಯಾಗಿದೆ. ಶೀಘ್ರದಲ್ಲಿಯೇ ಆ ಹಣ ಬಿಡುಗಡೆ ಮಾಡಲಾಗುವುದು. ಉಳಿದ ಹಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ’ ಎನ್ನುತ್ತಾರೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ಮಲ್ಲಿಕಾರ್ಜುನ.

ಖರೀದಿ ಕೇಂದ್ರ;ರೈತರ ಸಂಖ್ಯೆ;ಕಡಲೆ ಪ್ರಮಾಣ (ಕ್ವಿಂಟಲ್‌ಗಳಲ್ಲಿ)

ಅಮರಗೋಳ;3,680;46,421

ಅಣ್ಣಿಗೇರಿ;2,194;28,293

ಧಾರವಾಡ;2,182;26,953

ಕುಂದಗೋಳ;1,631;18,386

ಮೊರಬ;3,315;42,033

ನವಲಗುಂದ;4,900;64,207

ಯರಗಟ್ಟಿ;1,947;22,223

ಯಲಿವಾಳ;464;5,609

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.