ADVERTISEMENT

ಜಿಎಸ್‌ಟಿ ತಪ್ಪಿಸುವ ಪ್ರವೃತ್ತಿ ಪತ್ತೆ

ಬಿಲ್‌ ಇಲ್ಲದೆ ಸರಕು ಪೂರೈಕೆ, ಕಾಳಸಂತೆಯಲ್ಲಿ ಮಾರಾಟ

ಪಿಟಿಐ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
ಜಿಎಸ್‌ಟಿ ತಪ್ಪಿಸುವ ಪ್ರವೃತ್ತಿ ಪತ್ತೆ
ಜಿಎಸ್‌ಟಿ ತಪ್ಪಿಸುವ ಪ್ರವೃತ್ತಿ ಪತ್ತೆ   

ನವದೆಹಲಿ : ಸರಕುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಮತ್ತು ಆಮದು ಮಾಡಿಕೊಂಡ ಸರಕುಗಳ ಪ್ರಮಾಣದ ಕುರಿತು ತಪ್ಪು ಮಾಹಿತಿ ನೀಡುವ ಮೂಲಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸುವುದನ್ನು ತಪ್ಪಿಸಿಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿರುವುದು ಬೆಳಕಿಗೆ ಬಂದಿದೆ.

ತೆರಿಗೆಗೆ ಸಂಬಂಧಿಸಿದಂತೆ ಕಲೆ ಹಾಕಿರುವ ಅಂಕಿ ಅಂಶಗಳನ್ನು ಸಮಗ್ರವಾಗಿ ವಿಶ್ಲೇಷಿಸಲು ಆದೇಶಿಸಲಾಗಿದೆ.  ಇದರಿಂದ ತೆರಿಗೆ ತಪ್ಪಿಸುವವರನ್ನು ಗುರುತಿಸಲು ಸಾಧ್ಯವಾಗಲಿದೆ.

ಜಿಎಸ್‌ಟಿ ಸಂಗ್ರಹವು ತಿಂಗಳಿನಿಂದ ತಿಂಗಳಿಗೆ ಕಡಿಮೆಯಾಗುತ್ತಿರುವುದು ತೆರಿಗೆ ತಪ್ಪಿಸುವ ಪ್ರವೃತ್ತಿಯು ವ್ಯಾಪಕವಾಗಿರುವುದನ್ನು ದೃಢೀಕರಿಸುತ್ತದೆ. 73 ಸಾವಿರ ತೆರಿಗೆದಾರರು ₹30 ಸಾವಿರ ಕೋಟಿಗಳಷ್ಟು ‘ಐಜಿಎಸ್‌ಟಿ’ ಪಾವತಿಸಿದ್ದಾರೆ. ಆದರೆ, ಇದರಲ್ಲಿ ತಮಗೆ ಬರಬೇಕಾದ ತೆರಿಗೆ ವಾಪಸಾತಿಗೆ ಸಮರ್ಪಕವಾಗಿ ಬೇಡಿಕೆ ಮುಂದಿಟ್ಟಿಲ್ಲ.

ADVERTISEMENT

ಆಮದು ವಹಿವಾಟುದಾರರು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ಪಾವತಿಸುತ್ತಿದ್ದರೂ, ವಿದೇಶಗಳಿಂದ ತರಿಸಿದ  ಸರಕನ್ನು ದೇಶಿ ಮಾರುಕಟ್ಟೆಯಲ್ಲಿ ಬಿಲ್‌ ಇಲ್ಲದೆ ಪೂರೈಸುತ್ತಿದ್ದಾರೆ. ಬೃಹತ್‌ ಉದ್ದಿಮೆಗಳೂ ಹೀಗೆ ಮಾಡುತ್ತಿವೆ. ಆಮದು ಮಾಡಿಕೊಳ್ಳುವ ಮೊಬೈಲ್‌ಗಳನ್ನು ತೆರಿಗೆ ಪಾವತಿಸದೇ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದನ್ನು ರೆವೆನ್ಯೂ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ವಹಿವಾಟುದಾರರಲ್ಲಿ ಕಂಡು ಬಂದಿರುವ ಈ ತೆರಿಗೆ ತಪ್ಪಿಸುವ ಪ್ರವೃತ್ತಿಯು ಶನಿವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿಯೂ ಪ್ರಸ್ತಾಪಗೊಂಡಿತ್ತು.

ತೆರಿಗೆ ತಪ್ಪಿಸುವುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇನ್ನಷ್ಟು ಪರಿಷ್ಕರಿಸಿ ಖಚಿತ ತೀರ್ಮಾನಕ್ಕೆ ಬರಲು ಸೂಚಿಸಲಾಗಿದೆ. ಇದರಿಂದ ತೆರಿಗೆ ತಪ್ಪಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಜಿಎಸ್‌ಟಿ ಜಾರಿಗೆ ಬಂದ ಜುಲೈ ತಿಂಗಳ ತೆರಿಗೆ ಸಂಗ್ರಹ ₹93,590 ಕೋಟಿಗಳಷ್ಟಿತ್ತು. ನವೆಂಬರ್‌ನಲ್ಲಿ ₹83,716 ಕೋಟಿ ಮತ್ತು ಜನವರಿಯಲ್ಲಿ ₹88,047 ಕೋಟಿಗಳಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.