ADVERTISEMENT

ಜಿಎಸ್‌ಟಿ ಪ್ರಭಾವಕ್ಕೆ ಬೈಕ್‌, ಕಾರ್‌ ಬೆಲೆ ಅಗ್ಗ

ಪಿಟಿಐ
Published 4 ಜುಲೈ 2017, 4:44 IST
Last Updated 4 ಜುಲೈ 2017, 4:44 IST
ಜಿಎಸ್‌ಟಿ ಪ್ರಭಾವಕ್ಕೆ ಬೈಕ್‌, ಕಾರ್‌ ಬೆಲೆ ಅಗ್ಗ
ಜಿಎಸ್‌ಟಿ ಪ್ರಭಾವಕ್ಕೆ ಬೈಕ್‌, ಕಾರ್‌ ಬೆಲೆ ಅಗ್ಗ   

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯಲ್ಲಿನ ತೆರಿಗೆ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಇನ್ನಷ್ಟು ವಾಹನ ತಯಾರಿಕಾ ಸಂಸ್ಥೆಗಳು ಸೋಮವಾರ ಬೆಲೆ ಕಡಿತ ಘೋಷಿಸಿವೆ.

ದ್ವಿಚಕ್ರ ವಾಹನದಿಂದ ಹಿಡಿದು ಫೋರ್ಡ್‌ನ ಎಸ್‌ಯುವಿ ಎಂಡೇವರ್‌ನ ಬೆಲೆ ₹ 3.50ರಿಂದ ₹ 3 ಲಕ್ಷದವರೆಗೆ ಕಡಿಮೆಯಾಗಿದೆ.

ಕಾರು ತಯಾರಿಕಾ ಸಂಸ್ಥೆಗಳಾದ ಹೋಂಡಾ ಕಾರ್ಸ್ ಇಂಡಿಯಾ, ಫೋರ್ಡ್‌  ಮತ್ತು ದ್ವಿಚಕ್ರ ವಾಹನ ತಯಾರಿಸುವ ಟಿವಿಎಸ್ ಮೋಟಾರ್‌ ಕಂಪನಿ, ಹೋಂಡಾ ಮೋಟಾರ್‌ ಸೈಕಲ್‌ ಆ್ಯಂಡ್  ಸ್ಕೂಟರ್‌ ಇಂಡಿಯಾ ಮತ್ತು ಸುಜುಕಿ ಮೋಟಾರ್‌ ಸೈಕಲ್‌ ದರ ಕಡಿತ  ಪ್ರಕಟಿಸಿವೆ.

ಜಿಎಸ್‌ಟಿ ಕಾರಣಕ್ಕೆ ವಿವಿಧ ಮಾದರಿಗಳ ಕಾರುಗಳ ಮೇಲಿನ ಒಟ್ಟಾರೆ ತೆರಿಗೆ ಹೊರೆ ಕಡಿಮೆಯಾಗಿರುವುದರಿಂದ  ಹೋಂಡಾ ಕಾರ್ಸ್ ₹ 1.31 ಲಕ್ಷದವರೆಗೆ ದರ ಕಡಿತ ಮಾಡಿದೆ. ತಕ್ಷಣದಿಂದಲೇ ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ. ಮಧ್ಯಮ ಗಾತ್ರದ ಸೆಡಾನ್‌ ಸಿಟಿ ದರ ₹ 16,510 ರಿಂದ ₹ 28,005ರವರೆಗೆ  ಕಡಿತಗೊಂಡಿದೆ. ವಿವಿಧ ಶ್ರೇಣಿಯ ವಾಹನಗಳ  ದರಗಳಲ್ಲಿ ಶೇ 4.5ರಷ್ಟು ಕಡಿತ ಮಾಡಲಾಗಿದೆ ಎಂದು ಫೋರ್ಡ್‌ ಇಂಡಿಯಾ ತಿಳಿಸಿದೆ.

ದ್ವಿಚಕ್ರ ವಾಹನ: ಟಿವಿಎಸ್‌ ಮೋಟಾರ್‌ ಕಂಪನಿಯು ತನ್ನ ಬೈಕ್‌ಗಳ ಬೆಲೆಯನ್ನು ₹ 4,150ರವರೆಗೆ ಇಳಿಸಿದೆ.

ಹೋಂಡಾ ಮೋಟಾರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಕೂಡ ಬೈಕ್‌ಗಳ ಮಾದರಿ ಆಧರಿಸಿ ವಿವಿಧ ರಾಜ್ಯಗಳಲ್ಲಿ ₹ 5,500ರವರೆಗೆ ಬೆಲೆ ಕಡಿತ ಘೋಷಿಸಿದೆ. ದ್ವಿಚಕ್ರ ವಾಹನ ಮಾರಾಟದಲ್ಲಿ ಮುಂಚೂಣಿಯಲ್ಲಿ ಇರುವ ಹೀರೊ ಮೋಟೊ ಕಾರ್ಪ್‌ ಕೂಡ ₹ 1,800ರವರೆಗೆ ಬೆಲೆ ಕಡಿತ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.