ADVERTISEMENT

ಜಿಎಸ್‌ಟಿ: ಮಾರ್ಚ್‌ವರೆಗೆ ದಂಡ ಬೇಡ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:30 IST
Last Updated 5 ಅಕ್ಟೋಬರ್ 2017, 19:30 IST
ಜಿಎಸ್‌ಟಿ: ಮಾರ್ಚ್‌ವರೆಗೆ ದಂಡ ಬೇಡ
ಜಿಎಸ್‌ಟಿ: ಮಾರ್ಚ್‌ವರೆಗೆ ದಂಡ ಬೇಡ   

ಬೆಂಗಳೂರು: ‘ಜಿಎಸ್‌ಟಿ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಅಗತ್ಯವಿದೆ. ಈ ಸಂದರ್ಭದಲ್ಲಿ ಯಾವುದೇ ತಪ್ಪು ಮಾಡಿದರೂ 2018 ರ ಮಾರ್ಚ್‌ವರೆಗೆ ದಂಡ ವಿಧಿಸಬಾರದು’ ಎಂದು ರಾಜ್ಯದ ವಾಣಿಜ್ಯೋದ್ಯಮಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನಗರದ ಎಫ್‌ಕೆಸಿಸಿಐನಲ್ಲಿ ಜಿಎಸ್‌ಟಿ ಕುರಿತು ನಡೆದ ಸಂವಾದದಲ್ಲಿ, ವಹಿವಾಟಿನಲ್ಲಿ ಆಗಿರುವ ಹಿನ್ನಡೆ, ಬಿಗಿ ಕಾನೂನಿನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಉದ್ಯಮಿಗಳು ಬಿಜೆಪಿ ಮುಖಂಡರಿಗೆ ಬಿಸಿ ಮುಟ್ಟಿಸಿದರು.

‘ಜಿಎಸ್‌ಟಿ ಇನ್ನೂ ಹೊಸತು. ಆರಂಭದಲ್ಲಿ ಸಹಜವಾಗಿ ತಪ್ಪುಗಳು ಆಗುತ್ತವೆ. ಆದರೆ, ದಂಡ ವಿಧಿಸುವಂತಹ ಕಠಿಣ ನಿಲುವುಗಳನ್ನು ತೆಗೆದುಕೊಳ್ಳಬಾರದು’ ಎಂದು ವಾಣಿಜ್ಯೋದ್ಯಮಿಗಳ ಪರವಾಗಿ ಎಫ್‌ಕೆಸಿಸಿಐ ಅಧ್ಯಕ್ಷ ಕೆ. ರವಿ, ಬಿಜೆಪಿ ಸಂಸದ ಪಿ.ಸಿ.ಮೋಹನ್‌ ಅವರಿಗೆ ಮನವಿ ಮಾಡಿದರು.

ADVERTISEMENT

ರಿಟರ್ನ್‌ ಸಲ್ಲಿಕೆ ವಿಧಾನವನ್ನು ಇನ್ನಷ್ಟು ಸರಳಗೊಳಿಸಬೇಕು. ಈಗ ಅದು ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲ. ಸಣ್ಣ ವ್ಯಾಪಾರಿಗಳು ಪ್ರತಿ ತಿಂಗಳು ರಿಟರ್ನ್‌ ಸಲ್ಲಿಕೆ ಮಾಡಬೇಕಾಗಿರುವುದರಿಂದ, ಇದನ್ನು ತಯಾರಿ ಮಾಡುವುದೇ ದೊಡ್ಡ ಕೆಲಸವಾಗಿದೆ. ಇದರಿಂದಾಗಿ ವ್ಯಾಪಾರದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗಿದ್ದು, ವಹಿವಾಟು ಶೇ 50 ರಿಂದ ಶೇ 60 ರಷ್ಟು  ಕಡಿಮೆ ಆಗಿದೆ ಎಂದು ವಿವರಿಸಿದರು.

‘ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಆರ್ಥಿಕ ತಜ್ಞ ಡಾ.ರಂಗರಾಜನ್‌ ಅವರನ್ನು ಬುಧವಾರ ಸಂಜೆ ಭೇಟಿ ಮಾಡಿ ನಮ್ಮ ಆತಂಕವನ್ನು ಹೇಳಿಕೊಂಡೆವು. ಜಿಎಸ್‌ಟಿ ಒಳ್ಳೆಯ ವ್ಯವಸ್ಥೆಯಾಗಿದ್ದು, ಆರಂಭಿಕ ಸಮಸ್ಯೆ ಸರಿಯಾಗಲು ಕನಿಷ್ಠ ಆರು ತಿಂಗಳು ಬೇಕಾಗುತ್ತದೆ ಎಂದು ಅವರು ಭರವಸೆ ನೀಡಿದರು’ ಎಂದು ಹೇಳಿದರು.

ಮೋದಿಯವರ ದಾರಿ ತಪ್ಪಿಸಿದ್ದಾರೆ: ‘ಜಿಎಸ್‌ಟಿಗೆ ಸಂಬಂಧಿಸಿದಂತೆ ಕೆಲವರು ಪ್ರಧಾನಿ ನರೇಂದ್ರ ಮೋದಿಯವರ ದಾರಿ ತಪ್ಪಿಸಿದ್ದಾರೆ. ಇದರಿಂದಾಗಿ ಕಠಿಣ ಕಾನೂನು ಮತ್ತು ನಿಯಮಾವಳಿಗಳನ್ನು ಜಾರಿಗೆ ತರಲಾಗಿದೆ. ಇದು ಅತ್ಯಂತ ಕರಾಳ ಕಾನೂನು ಎಂದು ಮೋದಿ ಅಭಿಮಾನಿಯಾಗಿ ಹೇಳುತ್ತೇನೆ’ ಎಂದು ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಸಂಪತ್‌ ರಾಮನ್‌ ಹೇಳಿದರು.

‘ಪ್ರಾಮಾಣಿಕರನ್ನು ಶಿಕ್ಷಿಸುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಅದನ್ನು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಆ ಬಗ್ಗೆ ಕಾನೂನಿಗೆ ತಿದ್ದುಪಡಿ ಮಾಡಬೇಕು. ಕೆಲವು ಸರಕುಗಳ ಮೇಲೆ ವಿಪರೀತ ತೆರಿಗೆಯಿಂದಾಗಿ, ಗ್ರಾಹಕರ ಮೇಲೆ ಬರೆ ಬೀಳುವಂತಾಗಿದೆ’ ಎಂದರು.

ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ರಮೇಶ್‌ ಚಂದ್ರ ಲಹೋಟಿ ಮಾತನಾಡಿ, ‘ಜಿಎಸ್‌ಟಿ ಜಾರಿ ಆದ ಬಳಿಕ ಎಪಿಎಂಸಿ ವರ್ತಕರ ಬೆನ್ನು ಮೂಳೆ ಮುರಿದಂತಾಗಿದೆ. ನಗದು ಕೊರತೆಯಿಂದ ನಮ್ಮ ವ್ಯವಹಾರಗಳೇ ನಡೆಯುತ್ತಿಲ್ಲ. ಆಹಾರ ಧಾನ್ಯಗಳ ವಹಿವಾಟಿನಲ್ಲಿ ಶೇ 50 ರಷ್ಟು ಕುಸಿದಿದೆ’ ಎಂದು ಅಳಲು ತೋಡಿಕೊಂಡರು.

ಹಿಂದೆ ಶೇ 35 ರಷ್ಟು ಬ್ರ್ಯಾಂಡೆಡ್‌ ಉತ್ಪನ್ನಗಳು ಇದ್ದವು. ಜಿಎಸ್‌ಟಿ ಜಾರಿ ಆದ ಬಳಿಕ ಆ ಪ್ರಮಾಣ ಶೇ 1 ರಿಂದ 2 ಕ್ಕೆ ಇಳಿದಿದೆ ಎಂದರು.

ಬಿಜೆಪಿ ಆರ್ಥಿಕ ಪ್ರಕೋಷ್ಠದ ವಿಶ್ವನಾಥ್‌ ಭಟ್‌ ಮಾತನಾಡಿ, ಜಿಎಸ್‌ಟಿ ಜಾರಿ ಬಳಿಕ ಸಾಕಷ್ಟು ಸಮಸ್ಯೆಗಳು ಉದ್ಭವಿಸಿರುವುದು ನಿಜ. ಇನ್ನೂ ಎರಡರಿಂದ ಮೂರು ತಿಂಗಳು ಈ ಸಮಸ್ಯೆ ಇರುತ್ತದೆ. 2018–19 ರ ವೇಳೆಗೆ ಇದು ಅತ್ಯುತ್ತಮ ವ್ಯವಸ್ಥೆಯಾಗಿ ರೂಪುಗೊಳ್ಳುತ್ತದೆ ಎಂದರು.

‘ವಾಣಿಜ್ಯೋದ್ಯಮಿಗಳ ಮನವಿಯನ್ನು ಜಿಎಸ್‌ಟಿ ಮಂಡಳಿಗೆ ತಲುಪಿಸುತ್ತೇನೆ’ ಎಂದು ಸಂಸದ ಪಿ.ಸಿ.ಮೋಹನ್‌ ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.