ADVERTISEMENT

ಜಿಎಸ್‌ಟಿ: ರಾಜ್ಯಗಳಿಗೆ ಸಿಂಹಪಾಲು

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 18:39 IST
Last Updated 18 ಜೂನ್ 2018, 18:39 IST
ಜಿಎಸ್‌ಟಿ: ರಾಜ್ಯಗಳಿಗೆ ಸಿಂಹಪಾಲು
ಜಿಎಸ್‌ಟಿ: ರಾಜ್ಯಗಳಿಗೆ ಸಿಂಹಪಾಲು   

ನವದೆಹಲಿ: ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಮೂಲಕ ಸಂಗ್ರಹವಾಗುವ ಒಟ್ಟು ಮೊತ್ತದಲ್ಲಿ ಶೇ 50ರಷ್ಟನ್ನು ರಾಜ್ಯಗಳು ಪಡೆದುಕೊಳ್ಳುತ್ತಿವೆ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಜಿಎಸ್‌ಟಿ ಜಾರಿ ಬಳಿಕ ರಾಜ್ಯ ಸರ್ಕಾರಗಳ ಸಂಪನ್ಮೂಲ ಸಂಗ್ರಹದ ಸ್ವಾತಂತ್ರ್ಯವೇ ಮೊಟಕಾಗಿದೆ ಎಂದು ಭಾನುವಾರ ನಡೆದ ನೀತಿ ಆಯೋಗದ ಸಭೆಯಲ್ಲಿ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ನೀಡಿದ ಹೇಳಿಕೆಗೆ ಅವರು ಈ ರೀತಿ ತಿರುಗೇಟು ನೀಡಿದ್ದಾರೆ.

‘ಜಿಎಸ್‌ಟಿಯಲ್ಲಿನ ಪಾಲಿನ ಜತೆಗೆ, ಕೇಂದ್ರದಿಂದ ಹಂಚಿಕೆಯಾಗುವ ಅನುದಾನ ಮತ್ತು ತೈಲದ ಮೇಲೆ ವಿಧಿಸಲಾಗುವ ಸುಂಕದಿಂದಲೂ ರಾಜ್ಯಗಳು ಆದಾಯ ಪಡೆಯುತ್ತಿವೆ’ ಎಂದು ಜೇಟ್ಲಿ ವಿವರಿಸಿದ್ದಾರೆ.

ADVERTISEMENT

‘ತೈಲದ ಮೇಲೆ ರಾಜ್ಯಗಳು ವಿಧಿಸುವ ತೆರಿಗೆ ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ಇದಲ್ಲದೆ, ತೈಲದ ಮೇಲೆ ಬೇರೆ ಸುಂಕಗಳನ್ನೂ ರಾಜ್ಯಗಳು ವಿಧಿಸುತ್ತಿವೆ. ಇದಲ್ಲದೆ, ಸರಕುಗಳ ಮೇಲೆ ಸ್ಥಳೀಯ ತೆರಿಗೆಗಳನ್ನೂ ಹಾಕಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಕೇಂದ್ರವು ಸಂಗ್ರಹಿಸುವ ತೆರಿಗೆಯಲ್ಲಿ ಶೇ 42ರಷ್ಟನ್ನು ರಾಜ್ಯಗಳ ಜತೆಗೆ ಹಂಚಿಕೊಳ್ಳಲಾಗುತ್ತಿದೆ. ರಾಜ್ಯಗಳು ಸ್ಥಳೀಯ ತೆರಿಗೆಗಳಲ್ಲದೆ, ಜಿಎಸ್‌ಟಿಯ ಶೇ 50ರಷ್ಟನ್ನು ಪಡೆದುಕೊಳ್ಳುತ್ತಿವೆ’ ಎಂದು ಜೇಟ್ಲಿ ತಿಳಿಸಿದ್ದಾರೆ.

ಹಣಕಾಸು ಸಚಿವ ಯಾರು, ಕಾಂಗ್ರೆಸ್‌ ಪ್ರಶ್ನೆ: ಅರುಣ್‌ ಜೇಟ್ಲಿ ಅವರು ಹಣಕಾಸು ಸಚಿವಾಲಯದ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದಾರೆ ಎಂಬ ವರದಿಗಳ ಆಧಾರದಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ದೇಶದ ಹಣಕಾಸು ಸಚಿವ ಯಾರು ಎಂಬ ದ್ವಂದ್ವ ಇದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದೆ.

‘ಭಾರತದ ಹಣಕಾಸು ಸಚಿವ ಯಾರು? ಪ್ರಧಾನಿ ಕಾರ್ಯಾಲಯದ ವೆಬ್‌ಸೈಟ್‌ ಒಂದನ್ನು ಹೇಳಿದರೆ ಹಣಕಾಸು ಸಚಿವಾಲಯದ ವೆಬ್‌ಸೈಟ್‌ ಬೇರೊಂದನ್ನೇ ಹೇಳುತ್ತಿದೆ. ಖಾತೆರಹಿತ ಸಚಿವ ಎಂದು ಪ್ರಧಾನಿ ಕಾರ್ಯಾಲಯದ ವೆಬ್‌ಸೈಟ್‌ ಹೇಳುತ್ತಿರುವ ವ್ಯಕ್ತಿಯೊಬ್ಬರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ವಕ್ತಾರ ಮನೀಶ್‌ ತಿವಾರಿ ಹೇಳಿದ್ದಾರೆ.

ಕಿಡ್ನಿ ಕಸಿಗೆ ಒಳಗಾಗಿರುವ ಜೇಟ್ಲಿ ಅವರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಅವರು ಹೊಂದಿದ್ದ ಹಣಕಾಸು ಮತ್ತು ಉದ್ಯಮ ವ್ಯವಹಾರಗಳ ಖಾತೆಗಳನ್ನು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರಿಗೆ ವಹಿಸಲಾಗಿದೆ. ಹಾಗಾಗಿ ಪ್ರಧಾನಿ ಕಾರ್ಯಾಲಯದ ವೆಬ್‌ಸೈಟ್‌ನಲ್ಲಿ ಜೇಟ್ಲಿ ಅವರು ಖಾತೆರಹಿತ ಸಚಿವ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.