ADVERTISEMENT

ಜಿಡಿಪಿ ಗುರಿ ಕಷ್ಟ:ಮೊಂಟೆಕ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2011, 19:30 IST
Last Updated 31 ಆಗಸ್ಟ್ 2011, 19:30 IST
ಜಿಡಿಪಿ ಗುರಿ ಕಷ್ಟ:ಮೊಂಟೆಕ್
ಜಿಡಿಪಿ ಗುರಿ ಕಷ್ಟ:ಮೊಂಟೆಕ್   

ನವದೆಹಲಿ (ಪಿಟಿಐ): ಜಾಗತಿಕ ಆರ್ಥಿಕ ಅಸ್ಥಿರತೆ ಮುಂದುವರೆದಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ನಿಗದಿಪಡಿಸಿರುವ ಶೇ 8ರಷ್ಟು ಆರ್ಥಿಕ ವೃದ್ಧಿ ದರ (ಜಿಡಿಪಿ) ಗುರಿ ತಲುಪುದು ಕಷ್ಟಸಾಧ್ಯ ಎಂದು ಕೇಂದ್ರ ಯೋಜನಾ ಆಯೋಗ ಹೇಳಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ವೃದ್ಧಿ ದರ ಶೇ 8.8ರಿಂದ ಶೇ 7.7ಕ್ಕೆ ಕುಸಿದಿದೆ. ಇದು ಕಳೆದ ಆರು ತ್ರೈಮಾಸಿಕ ಅವಧಿಗಳಲ್ಲಿ ಗರಿಷ್ಠ ಮಟ್ಟದ ಇಳಿಕೆಯಾಗಿದೆ.

`ಇತ್ತೀಚಿನ ಜಾಗತಿಕ ಬೆಳವಣಿಗೆಗಳು ದೇಶೀಯ ಆರ್ಥಿಕತೆಯ ಮೇಲೆ ನಿರಂತರ ಪರಿಣಾಮ ಬೀರುತ್ತಿದ್ದು, ಇದರಿಂದ ನಿಗದಿಪಡಿಸಿರುವ ವೃದ್ಧಿ ದರ ಗುರಿ ತಲುಪಲು ಸಾಧ್ಯವಾಗದಿರಬಹುದು~ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

`ಈ ವರ್ಷವು ಉತ್ತಮ ಆರ್ಥಿಕ ವರ್ಷ ಆಗಲಿದೆ ಎಂಬ ವಿಶ್ವಾಸ ನನಗಿಲ್ಲ. ಸದ್ಯದ ಜಾಗತಿಕ ಸಂಗತಿಗಳು ದೇಶೀಯ ಮಾರುಕಟ್ಟೆಯ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರುತ್ತಿವೆ. ಆದರೆ, ವೃದ್ಧಿ ದರ  ಎಷ್ಟಾಗಲಿದೆ  ಎನ್ನುವುದಕ್ಕಿಂತ ಈ ಆರ್ಥಿಕ ಹಿಂಜರಿತದ ಪರಿಣಾಮಗಳಿಂದ ಹೊರಬರುವುದು ಹೇಗೆ ಎನ್ನುವುದು ಸದ್ಯಕ್ಕೆ ನಮ್ಮ ಎದುರು ಇರುವ ದೊಡ್ಡ ಸವಾಲು~ ಎಂದು ಹೇಳಿದ್ದಾರೆ. 

ಈ ಮೊದಲು ಯೋಜನಾ ಆಯೋಗ 2011-12ನೇ ಸಾಲಿನಲ್ಲಿ ಶೇ 8 ರಿಂದ ಶೇ 8.3ರಷ್ಟು ವೃದ್ಧಿ ದರ ಅಂದಾಜಿಸಿತ್ತು. ಕೇಂದ್ರ ಸರ್ಕಾರವು ಈ ವರ್ಷಾಂತ್ಯಕ್ಕೆ ವೃದ್ಧಿ ದರ ಶೇ 8.5ರಷ್ಟಾಗಲಿದೆ ಎಂದು ಹೇಳಿತ್ತು. ಆದರೆ, ಇತ್ತಿಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ `ಜಿಡಿಪಿ~ ಮಾರ್ಚ್ ಅಂತ್ಯಕ್ಕೆ ಶೇ 8ಕ್ಕೆ ಇಳಿಕೆಯಾಗಲಿದೆ ಎಂದು ವರದಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.