ADVERTISEMENT

ಜಿಡಿಪಿ: ಮೊಂಟೆಕ್ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ನವದೆಹಲಿ (ಐಎಎನ್‌ಎಸ್): `ಮುಂದಿನ ಲೋಕಸಭೆ ಚುನಾವಣೆ (2014)ವರೆಗೆ ಯಾವುದೇ ಮಹತ್ವದ ಆರ್ಥಿಕ ಸುಧಾರಣೆಗಳು ದೇಶದಲ್ಲಿ ನಡೆಯುವುದಿಲ್ಲ~ ಎಂಬ ಹಿರಿಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರ ಈ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯಿಸಿರುವ, ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯ, ಸರ್ಕಾರವು ದೇಶದ ಆರ್ಥಿಕ ಪ್ರಗತಿ ಗತಿಯನ್ನು ಮರಳಿ ಹಿಂದಿನ ಗರಿಷ್ಠ ಮಟ್ಟಕ್ಕೆ ತರಲು ಶ್ರಮಿಸುತ್ತಿದೆ. ಸುಧಾರಣೆಯ ಮುಖ್ಯ ಉದ್ದೇಶವೇ `ಜಿಡಿಪಿ~ ಚೇತರಿಕೆ ಎಂದು ಸ್ಪಷ್ಟಪಡಿಸಿದಾರೆ.

ಕಳೆದ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಹಲವು ಆರ್ಥಿಕ ಸುಧಾರಣೆ ಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಅವೆಲ್ಲವನ್ನೂ ಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಇದರ ಅರ್ಥ ಒಟ್ಟಾರೆ ಆರ್ಥಿಕ ಸುಧಾರಣೆ ಮಂದಗತಿಯಲ್ಲಿ ನಡೆದಿದೆ ಎಂದಲ್ಲ. ಸರ್ಕಾರದ ಗಮನ ಏನಿದ್ದರೂ ಸುಸ್ಥಿರ ಆರ್ಥಿಕ ಪ್ರಗತಿಯತ್ತ. ಆ ಹಿನ್ನಲೆಯಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ಅಗತ್ಯವಿದೆ ಎನ್ನುವ ಮಾತನ್ನು ಒಪ್ಪಿಕೊಳ್ಳುವೆ ಎಂದು ಮೊಂಟೆಕ್ ಹೇಳಿದ್ದಾರೆ.

`ಮುಂಬರುವ ವರ್ಷಗಳಲ್ಲಿ ಹಲವು ಮಹತ್ವದ ಆರ್ಥಿಕ ಸುಧಾರಣೆಗಳನ್ನು ನೀವು ಕಾಣಬಹುದು. 2015ರ ವೇಳೆಗೆ ಭಾರತ ಪ್ರಪಂಚದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಗಳಲ್ಲೊಂದಾಗಿರಲಿದೆ. ಮೂಲಸೌಕರ್ಯ, ಇಂಧನ, ತೈಲ ಪೂರೈಕೆ ಸೇರಿದಂತೆ ಹಲವು ವಲಯಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಆಗಲಿದೆ. ಈಗಾಗಲೇ `ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಿಸಿದ್ದೇವೆ. ಇವೆಲ್ಲ ಆರ್ಥಿಕ ಸುಧಾರಣೆಯ ಭಾಗ. ಈ ಮೂಲಕ ದೇಶ ಹಿಂದಿನ ಗರಿಷ್ಠ ಮಟ್ಟದ ಪ್ರಗತಿ ಪಥಕ್ಕೆ ಮರಳುತ್ತಿದೆ~ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.