ADVERTISEMENT

ಟಾಟಾ ನ್ಯಾನೊ ಪ್ರತ್ಯೇಕ ಮಾರಾಟ ಮಳಿಗೆ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2011, 19:00 IST
Last Updated 18 ಏಪ್ರಿಲ್ 2011, 19:00 IST

ನವದೆಹಲಿ (ಪಿಟಿಐ): ಸಣ್ಣ  ಕಾರು ‘ನ್ಯಾನೊ’ ಮಾರಾಟವನ್ನು ಹೆಚ್ಚಿಸಲು ಟಾಟಾ ಮೊಟಾರ್ಸ್ ದೇಶದಾದ್ಯಂತ ಪ್ರತ್ಯೇಕ ನ್ಯಾನೊ ಮಾರಾಟ ಮಳಿಗೆಗಳನ್ನು ತೆರೆಯಲಿದೆ.

‘ಏಸ್’ ಟ್ರಕ್ ಮಾರಾಟ ಮಳಿಗೆಗಳಂತೆ ‘ನ್ಯಾನೊ’ ಮಾರಾಟ ಮಳಿಗೆಗಳು ಕೂಡ ಸಣ್ಣ ನಗರಗಳಲ್ಲಿ ಅಸ್ತಿತ್ವಕ್ಕೆ ಬರಲಿವೆ. ಈಗಾಗಲೇ 600ಕ್ಕೂ ಹೆಚ್ಚು ಏಸ್ ಟ್ರಕ್ ಸ್ವತಂತ್ರ ಮಾರಾಟ ಮಳಿಗೆಗಳು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಗರಿಷ್ಠ ಮಟ್ಟದ ಯಶಸ್ಸು ಕಂಡಿವೆ.

‘ನಾವು ನ್ಯಾನೊ ಕಾರುಗಳಿಗಾಗಿಯೇ ಪ್ರತ್ಯೇಕ ಮಾರಾಟ ಮಳಿಗೆಗಳನ್ನು ತೆರೆಯಲು ಆಸಕ್ತಿ ಹೊಂದಿರುವ ಹಂಚಿಕೆದಾರರ ಶೋಧದಲ್ಲಿದ್ದೇವೆ’ ಎಂದು ಟಾಟಾ ವಕ್ತಾರ ತಿಳಿಸಿದ್ದಾರೆ.  ಈ ಮಳಿಗೆಗಳನ್ನು ಯಾವಾಗ ಪ್ರಾರಂಭಿಸಲಾಗುವುದು, ಮತ್ತು ಎಷ್ಟು ಸಂಖ್ಯೆಯಲ್ಲಿರುತ್ತವೆ ಎನ್ನುವುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ. ಸದ್ಯ ಟಾಟಾ ‘ನ್ಯಾನೊ’ ಕಾರುಗಳು ದೇಶದಾದ್ಯಂತ ಇರುವ 617 ಮಾರಾಟ ಮಳಿಗೆಗಳಲ್ಲಿ ಲಭ್ಯ ಇವೆ. ಇತ್ತೀಚೆಗೆ ಕಂಪೆನಿ ಬಿಗ್ ಬಜಾರ್‌ಗಳ ಮೂಲಕವೂ ‘ಒಂದು ಲಕ್ಷದ ವಿಸ್ಮಯ’ ಎಂಬ ಹೆಸರಿನಲ್ಲಿ  ನ್ಯಾನೊ ಮಾರಾಟ ಅಭಿಯಾನ ಪ್ರಾರಂಭಿಸಿದೆ.

ಬೆಂಕಿ ಆಕಸ್ಮಿಕ ಘಟನೆಗಳು ನಡೆದ ನಂತರ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಟಾಟಾ ಕಳೆದ ವರ್ಷ ಬಿಡುಗಡೆ ಮಾಡಿದ್ದ ನ್ಯಾನೊ  ಕಾರುಗಳನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದಿದೆ.  ಕಳೆದ ನಾಲ್ಕು ತಿಂಗಳಲ್ಲಿ ‘ನ್ಯಾನೊ’ ಮಾರಾಟವೂ ಗಣನೀಯವಾಗಿ ಹೆಚ್ಚಿದ್ದು, ಕಳೆದ ತಿಂಗಳು 8,707 ಕಾರುಗಳು ಮಾರಾಟವಾಗಿವೆ ಎಂದು ವಕ್ತಾರ ತಿಳಿಸಿದ್ದಾರೆ. ಬೆಂಕಿ ಆಕಸ್ಮಿಕ ಘಟನೆಗಳು ವರದಿಯಾದ ನಂತರ, ನ್ಯಾನೊ ತಿಂಗಳ ಮಾರಾಟ ಕಳೆದ ನವೆಂಬರ್‌ನಲ್ಲಿ (509ಕ್ಕೆ) ತೀವ್ರ ಕುಸಿತ ಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.